ಮುಂಬೈ: ಯೆಸ್ ಬ್ಯಾಂಕ್ ಸಂಕಷ್ಟಕ್ಕೆ ಈಡಾದ ಕಾರಣ ಗ್ರಾಹಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಅದರ ಸಂಕಷ್ಟಕ್ಕೆ ಮೂವತ್ತು ದಿನಗಳ ಸಮಯ ಮಿತಿಯಲ್ಲಿ ಪರಿಹಾರ ಒದಗಿಸಲಾಗುವುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಯೆಸ್ ಬ್ಯಾಂಕ್ನ ವಹಿವಾಟಿ ಮೇಲೆ ನಿರ್ಬಂಧ ಹೇರಿ ಅದನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ನಿರ್ಧಾರವನ್ನು ದೊಡ್ಡ ಮಟ್ಟದಲ್ಲಿ ಚರ್ಚಿಸಿಯೇ ತೆಗೆದುಕೊಳ್ಳಲಾಗಿದೆ. ಇದು ವೈಯಕ್ತಿಕ ಅಥವಾ ವ್ಯಕ್ತಿಗತ ಮಟ್ಟದಲ್ಲಿ ತೆಗೆದುಕೊಂಡ ನಿರ್ಣಯವಲ್ಲ. ಒಟ್ಟಾರೆ ಹಣಕಾಸು ವ್ಯವಸ್ಥೆಯ ಸುರಕ್ಷತೆಯ ದೃಷ್ಟಿ ಈ ನಿರ್ಣಯದ ಉದ್ದೇಶ ಎಂಬುದನ್ನು ಶಕ್ತಿಕಾಂತ ದಾಸ್ ವಿವರಿಸಿದರು.
ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಆರ್ಬಿಐ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತಿರುವುದನ್ನು ಖಾತ್ರಿ ಪಡಿಸಿದ ಶಕ್ತಿಕಾಂತ ದಾಸ್, 30 ದಿನಗಳ ಕಾಲಮಿತಿಯಲ್ಲಿ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಆರ್ಬಿಐ ಪರಿಹಾರ ಕಂಡುಕೊಂಡಿರುತ್ತದೆ ಎಂಬ ಖಾತ್ರಿಯನ್ನೂ ನೀಡಿದರು.
ಮಾರುಕಟ್ಟೆ ಆಧಾರಿತ ಸಮಸ್ಯೆಗೆ ಅದಕ್ಕೆ ಸೂಕ್ತವಾದ ಪರಿಹಾರವನ್ನೇ ಕಂಡುಕೊಳ್ಳಬೇಕು. ಹೀಗಾಗಿ, ಅದರ ಪುನಶ್ಚೇತನಕ್ಕೆ ನೀವು ಬ್ಯಾಂಕು ಮತ್ತು ಆಡಳಿತ ಮಂಡಳಿಗೆ ಸಮಯಾವಕಾಶವನ್ನು ನೀಡಲೇಬೇಕು. ಅವರು ಆ ಪ್ರಯತ್ನದಲ್ಲೇ ಇದ್ದರು. ಆದರೆ ಆ ಪ್ರಯತ್ನ ಕೆಲಸ ಮಾಡುತ್ತಿಲ್ಲ ಎಂಬುದನ್ನು ಗಮನಿಸಿಯೇ ಆರ್ಬಿಐ ಮಧ್ಯಪ್ರವೇಶಿಸಿದೆ ಎಂದು ದಾಸ್ ಹೇಳಿದರು. (ಏಜೆನ್ಸೀಸ್)