ನ್ಯೂಸ್

ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಆರ್​ಬಿಐ ತಂದಿರುವ ಹತ್ತಂಶದ ಸೂತ್ರಗಳು ಏನವು?; ಇಲ್ಲಿವೆ ನೋಡಿ..

ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ, ಯೆಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು ಮತ್ತು ಅದರ ಪುನಶ್ಚೇತನಕ್ಕೆ ಆಸಕ್ತಿ ತಳೆದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ತಿಳಿಸಿದೆ.

ಅಲ್ಲದೆ ಆರ್​ಬಿಐ ಸಾರ್ವಜನಿಕರಿಂದ ಹಾಗೂ ಯೆಸ್​ ಬ್ಯಾಂಕ್​ನಲ್ಲಿ ಷೇರ್, ಖಾತೆ​, ಠೇವಣಿ ಇಟ್ಟವರಿಂದ ಸಲಹೆಗಳನ್ನು ಆಹ್ವಾನಿಸಿದ್ದು, ಮಾರ್ಚ್​ 9ನೇ ​(ಸೋಮವಾರ)ದವರೆಗೂ ಸಲಹೆಗಳನ್ನು ಸ್ವೀಕರಿಸಲಿದೆ. ತಮ್ಮ ಸಲಹೆಗಳನ್ನು ಯೆಸ್​ ಬ್ಯಾಂಕ್​ ಅಥವಾ ಆರ್​ಬಿಐಗಳಿಗೆ ಸಲ್ಲಿಸಬಹುದು ಎಂದು ಆರ್​ಬಿಐ ತಿಳಿಸಿದೆ.

ಯೆಸ್​ ಬ್ಯಾಂಕ್​ ಪುನಾರಚನೆ ಬಗ್ಗೆ ಆರ್​ಬಿಐ ತಳೆದ 10 ಅಂಶಗಳು ಹೀಗಿವೆ.

1. ಯೆಸ್​ ಬ್ಯಾಂಕ್​ನಲ್ಲಿರುವ ಠೇವಣಿ ಅದೇ ಷರತ್ತು ಮತ್ತು ನಿಬಂಧನೆಗಳೊಂದಿಗೆ ಹಾಗೆಯೇ ಮುಂದುವರಿಯುತ್ತದೆ. ಯೋಜನೆಯಿಂದ ಖಾತೆಗಳ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ.

2. ಬ್ಯಾಂಕ್​ನ ಅಧಿಕೃತ ಬಂಡವಾಳವು 5,000 ಕೋಟಿ ರೂಪಾಯಿಗೆ ಬದಲಾಗುತ್ತದೆ. ತಲಾ 2ರ ಈಕ್ವಿಟಿ ಷೇರುಗಳ ಸಂಖ್ಯೆಯನ್ನು 2400 ಕೋಟಿ ರೂ.ಗೆ ಬದಲಾಯಿಸಲಾಗುತ್ತದೆ. ಪುನಶ್ಚೇತನಗೊಳಿಸಿದ ಯೆಸ್ ಬ್ಯಾಂಕಿನ ಷೇರುಗಳಲ್ಲಿ ಹೂಡಿಕೆ ಮಾಡಲು ಬ್ಯಾಂಕ್ ಒಪ್ಪುತ್ತದೆ. ನಂತರ ಬ್ಯಾಂಕಿನಲ್ಲಿ 49% ಷೇರುಗಳನ್ನು 10 ರೂ. ಕ್ಕಿಂತ ಕಡಿಮೆ (ಮುಖಬೆಲೆ 2 ರೂ.) ಮತ್ತು ಪ್ರೀಮಿಯಂ 8 ರೂ. ಗಳಿಗಿಂತ ಕಡಿಮೆ ಇರುತ್ತದೆ.

3. ಯೆಸ್ ಬ್ಯಾಂಕ್‌ನಲ್ಲಿ ಷೇರು ಖರೀದಿಸಿದ ದಿನಾಂಕದಿಂದ ಮೂರು ವರ್ಷ ಪೂರ್ಣಗೊಳ್ಳುವ ಮೊದಲು ಹೂಡಿಕೆದಾರರ ಬ್ಯಾಂಕ್ ತನ್ನ ಹಿಡುವಳಿಯನ್ನು 26% ಕ್ಕಿಂತ ಕಡಿಮೆ ಮಾಡಬಾರದು.

4. ರಿಸರ್ವ್ ಬ್ಯಾಂಕ್ ನೇಮಿಸಿದ ಯೆಸ್ ಬ್ಯಾಂಕ್‌ನ ನಿರ್ವಾಹಕರ ಕಚೇರಿಯನ್ನು ತೆರವುಗೊಳಿಸಿ, ಹೊಸ ಮಂಡಳಿಯನ್ನು ರಚಿಸಲಾಗುತ್ತದೆ.

5. ಯೆಸ್​ ಬ್ಯಾಂಕ್​ ಪುನಶ್ಚೇತನಗೊಂಡ ನಂತರ ಇಬ್ಬರು ನಾಮ ನಿರ್ದೇಶಿತ ನಿರ್ದೇಶಕರನ್ನು ನೇಮಕ ಮಾಡಲಾಗುವುದು.

6. ಆರ್​ಬಿಐ ಯೆಸ್​ ಬ್ಯಾಂಕ್​ನ ಮಂಡಳಿಗೆ ಹೆಚ್ಚುವರಿ ನಿರ್ದೇಶಕರನ್ನು ಮಾಡಬಹುದು. ಅಲ್ಲದೆ, ಇನ್ನೂ ಹೆಚ್ಚಿನ ನಿರ್ದೇಶಕರನ್ನು ನೇಮಿಸಲು ಯೆಸ್ ಬ್ಯಾಂಕಿನ ನಿರ್ದೇಶಕರ ಮಂಡಳಿ ಮುಕ್ತವಾಗಿರುತ್ತದೆ.

7. ಪುನಶ್ಚೇತನಗೊಂಡ ಯೆಸ್​ ಬ್ಯಾಂಕ್​ನ ಎಲ್ಲ ಸಿಬ್ಬಂದಿ ಅದೇ ಸಂಬಳದೊಂದಿಗೆ ತಮ್ಮ ಸೇವೆಯಲ್ಲಿ ಮುಂದುವರಿಯುತ್ತಾರೆ. ಅವರ ಸೇವೆಯಲ್ಲಿ ಮುಂದುವರಿಯಲು ಹಳೆಯ ನಿಯಮಗಳು ಮತ್ತು ಷರತ್ತುಗಳು ಮುಂದುವರಿಯುತ್ತವೆ. ಇದು ಸೇವೆ ಮತ್ತು ನಿವೃತ್ತಿಗೂ ಅನ್ವಯವಾಗುತ್ತದೆ.

8. ಯೆಸ್ ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಸರಿಯಾದ ವಿಧಾನದಿಂದ ಕಾರ್ಯ ನಿರ್ವಹಿಸಿದ ನಂತರ ಯಾವುದೇ ಸಮಯದಲ್ಲಿ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ (ಕೆಎಂಪಿ) ಸೇವೆಯನ್ನು ಸ್ಥಗಿತಗೊಳಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತದೆ.

9. ಈಗಿರುವ ಸ್ಥಳಗಳಲ್ಲೇ ಬ್ಯಾಂಕ್​ನ ಕಚೇರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಇದರ ಮೇಲೆ ಯಾವ ರೀತಿಯ ಪರಿಣಾಮ ಬೀರುವುದಿಲ್ಲ.

10. ಈಗ ಚಾಲ್ತಿಯಲ್ಲಿರುವ ಆರ್​ಬಿಐ ನೀತಿಗೆ ಅನುಗುಣವಾಗಿ ಯೆಸ್​ ಬ್ಯಾಂಕ್​ನ ಹೊಸ ಕಚೇರಿಗಳು ಮತ್ತು ಶಾಖೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಕಚೇರಿಗಳು ಅಥವಾ ಶಾಖೆಗಳನ್ನು ಮುಚ್ಚಲು ಪುನಶ್ಚೇತನಗೊಂಡ ಯೆಸ್ ಬ್ಯಾಂಕ್‌ಗೆ ಮುಕ್ತವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ. (ಏಜೆನ್ಸೀಸ್​)