ನವದೆಹಲಿ: ಕರೊನಾ ಬಿಕ್ಕಟ್ಟು, ಆರ್ಥಿಕತೆ ವಿಷಯಗಳನಿಟ್ಟು ಕೊಂಡು ತಮ್ಮ ಜಾಲತಾಣ ಖಾತೆ ಮೂಲಕ ನಿರಂತರ ಟೀಕೆಗಳನ್ನು ಮಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಟೀಕೆಗಳಲ್ಲಿ ಗೋಲ್‍ಮಾಲ್ ಮಾಡುತ್ತಿದ್ದಾರೆ, ಮುಂಚೆಯೇ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದಕ್ಕೆ ಪ್ರಮುಖ ಕಾರಣವಾಗಿರುವುದು ಅವರ ತಲೆಕೂದಲು. ಜುಲೈ 10ರಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಸರ್ಕಾರದ ಕ್ರಮದ ಬಗ್ಗೆ ಟೀಕೆ ವ್ಯಕ್ತಪಡಿಸಿದ ವಿಡಿಯೋವನ್ನು ರಾಹುಲ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅವರ ತಲೆ ಕೂದಲೂ ಸಣ್ಣಕ್ಕೆ ಇತ್ತು. ಕರೊನಾ ಪರಿಸ್ಥಿತಿ ಬಗ್ಗೆ ಶುಕ್ರವಾರ ಮತ್ತೊಂದು ವಿಡಿಯೋವನ್ನು ರಾಹುಲ್ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅವರ ತಲೆ ಕೂದಲು ಜುಲೈ 10 ವಿಡಿಯೋಗಿಂತ ಹೆಚ್ಚು ಉದ್ದವಾಗಿದೆ. ಏಳು ದಿನಗಳಲ್ಲಿ ತಲೆಗೂದಲು ಇಷ್ಟೊಂದು ಬೆಳೆಯಲು ಸಾಧ್ಯವೆ? ಎಂದು ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಗಾಂಧಿ ಮುಂಚಿತವಾಗಿ ವಿಡಿಯೋಗಳನ್ನು ಮಾಡಿಟ್ಟುಕೊಂಡು ಸಮಯಕ್ಕೆ ತಕ್ಕಂತೆ ಹಂಚಿಕೊಳ್ಳುತ್ತಿದ್ದಾರೆ. ಮುಂಚಿತವಾಗಿ ಅವರಿಗೆ ವಿಷಯಗೊತ್ತಿದ್ದರೆ ಅದನ್ನು ಅವರೇಕೆ ಹಂಚಿಕೊಳ್ಳುತ್ತಿಲ್ಲ? ಎಂದು ಕೆಲವರು ಪ್ರಶ್ನಿಸಿದ್ದಾರೆ.. ಇನ್ನು ಕೆಲವರು ನೀವು ಯಾವ ಶಾಂಪೂ ಬಳಸುತ್ತೀರಾ ಎಂದು ರಾಹುಲ್ ಕಾಲೆಳೆದಿದ್ದಾರೆ.