ವಿರಾಜಪೇಟೆ : ಕೊಡಗು ಕಲಾವಿದರ ಸಂಘದ ವತಿಯಿಂದ ವಿರಾಜಪೇಟೆ ನಿಸರ್ಗ ಬಡಾವಣೆಯ ಕೆ.ಕೆ.ಗ್ರೂಪ್ ಸಭಾಂಗಣದಲ್ಲಿ ಭಾನುವಾರ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಅಪಾಡಂಡ ಟಿ.ರಘು ಅವರಿಗೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಯಿತು.
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಪತ್ರಕರ್ತ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ವರ್ಷವಿಡೀ ಎ.ಟಿ.ರಘು ಅವರನ್ನು ಸ್ಮರಿಸುವ ಕಾರ್ಯಕ್ರಮ ನಡೆಯಲಿದೆ. ರಘು ಸಾಕಷ್ಟು ಕನ್ನಡ ಮತ್ತು ಕೆಲವು ಕೊಡವ ಧಾರಾವಾಹಿಗಳನ್ನು ನಿರ್ಮಿಸಿದ ಮಹಾನ್ ಕಲಾವಿದ. ಕೊಡಗಿನಲ್ಲಿ ಅಳಿವಿನಲ್ಲಿದ್ದ ಐನ್ ಮನೆಗಳನ್ನು ಪವಿತ್ರ ದೇವಾಲಯವೆಂದು ಅದರ ಮಹತ್ವನ್ನು ತಿಳಿಸಿದ ರಘು ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ತಿಳಿಸಿದರು.
ಪತ್ರಕರ್ತ ಉಳ್ಳಿಯಡ ಪೂವಯ್ಯ ಮಾತನಾಡಿ, ರಘು ಅವರನ್ನು ಹತ್ತಿರದಿಂದ ಕಂಡವನು ನಾನು. ಕೊನೆಯ ದಿನಗಳಲ್ಲಿ ಅವರು ಸಂಕಷ್ಟದ ದಿನಗಳನ್ನು ಕಂಡರು. ಅವರ ಸಾಧನೆಗಳನ್ನು ನಾವು ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು ಎಂದರು.
ಪತ್ರಕರ್ತ ಅನಂತಶಯನ, ನಿವೃತ್ತ ಪ್ರಾಂಶುಪಾಲ ಇಟ್ಟಿರ ಬಿದ್ದಪ್ಪ ಪೊನ್ನಚ್ಚೆಟಿರ ರಮೇಶ್, ನಡು ಬಾಡೆ ಕೊಡವ ಸಂಘಟನೆಯ ಚಾಮೇರ ದಿನೇಶ್, ಕೊಡಗು ಕಲಾವಿದರ ಸಂಘದ ಅಧ್ಯಕ್ಷ ಮತ್ತು ನಿರ್ಮಾಪಕ ಕಲಾವಿದ ಕೊಟ್ಟುಕತ್ತೀರ ಪ್ರಕಾಶ್, ಬೆಂಗಳೂರು ಮತ್ತಿಕೆರೆ ಚಿಮ್ಮಿ ಗಾಮೆರ್ಂಟ್ಸ್ ಮಾಲೀಕ ಕೊಟ್ರಮಾಡ ಲಾಲ ಪೂಣಚ್ಚ, ಶಾಂತಾ ಪೂವಯ್ಯ, ಎ.ಟಿ. ರಘು ಅವರ ಪುತ್ರಿ ಬಯವಂಡ ಬಿನು ಸಚೀನ್, ಕನ್ನಡ ಸಾಹಿತ್ಯ ಪರಿಷತ್‌ನ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಮಾದಂಡ ಪೂವಯ್ಯ, ಚೆರಿಯಪಂಡ ಸುರೇಶ್, ನಿವೃತ ಸೈನಿಕ ವಾಂಚೀರ ವಿಠಲ್ ನಾಣಯ್ಯ, ಹಿರಿಯ ಕಲಾವಿದರಾದ ನೆರವಂಡ ಉಮೇಶ್, ಕೊಡವ ಸಿಮಿಮಾ ನಿರ್ಮಾಪಕ, ನಿರ್ದೇಶಕ ಬಾಳೆಯಡ ಪ್ರತೀಶ್ ಪೂವಯ್ಯ, ಅಚೇಯಂಡ ಗಗನ್ ಗಣಪತಿ, ಕಲಾವಿದ ಅಲ್ಲಾರಂಡ ವಿಠಲ್ ನಂಜಪ್ಪ, ನಟರಾದ ಬಿದ್ದಂಡ ಉತ್ತಮ್ ಪೊನ್ನಪ್ಪ ನೆಲ್ಲಚಂಡ ರೇಖಾ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭ ಎ.ಟಿ.ರಘು ಅವರ ಬಗೆಗಿನ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಸಾಹಿತಿಗಳಾದ ಉಳುವಂಗಡ ಕಾವೇರಿಉದಯ ರಘು ಕವನ ವಾಚಿಸಿದರು.