ನ್ಯೂಸ್

ಹಕ್ಕುಬಾಧ್ಯತಾ ಸಮಿತಿ ಸಭೆಗೆ ಯತ್ನಾಳ್ ಹಾಜರಿ: ಬಿಜೆಪಿಯೇ ಗುರಿ | Attempt to annoy Vijayendra

ಬೆಂಗಳೂರು: ವಿಧಾನಸಭೆಯ ಹಕ್ಕುಬಾಧ್ಯತೆಗಳ ಸಮಿತಿ ಸಭೆಗೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗುರುವಾರ ಹಾಜರಾಗಿ, ಸಮಿತಿಗಳ ಸಭೆಗೆ ಬಿಜೆಪಿ ಬಹಿಷ್ಕಾರ ಚಳವಳಿಯಿಂದ ದೂರ ಅಂತರ ಕಾಯ್ದುಕೊಂಡರು.

ಆದರೆ ವಿಧಾನಸಭೆಯಿಂದ ಬಿಜೆಪಿಯ 18 ಶಾಸಕರನ್ನು ಆರು ತಿಂಗಳು ಅಮಾನತು ಜತೆಗೆ ಕಠಿಣ ನಿರ್ಬಂಧ ವಿಧಿಸಿರುವುದನ್ನು ಹಿಂಪಡೆಯಲು ಕೋರಿ ಸ್ಪೀಕರ್‌ಗೆ ಯತ್ನಾಳ್ ಪತ್ರ ಬರೆದಿದ್ದಾರೆ.

ಸ್ಪೀಕರ್ ತೆಗೆದುಕೊಂಡ ಸಸ್ಪೆಂಡ್ ಕ್ರಮವನ್ನು ವಿರೋಧಿಸಿ ವಿಧಾನ ಮಂಡಲ ಸಮಿತಿಗಳ ಸಭೆಗೆ ಅಸಹಕಾರ ಚಳವಳಿ ಹೂಡಿರುವ ಬಿಜೆಪಿ, ಶಾಸಕರ ಸಸ್ಪೆಂಡ್ ಆದೇಶ ವಾಪಸ್ ಪಡೆಯುವ ತನಕ ಸಭೆಗೆ ಬಹಿಷ್ಕರಿಸಲು ತೀರ್ಮಾನಿಸಿದೆ.

ಹಕ್ಕುಬಾಧ್ಯತೆಗಳ ಸಮಿತಿ ಸಭೆಗೆ ಯತ್ನಾಳ್ ಹಾಜರಾಗಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿ ತೆಗೆದುಕೊಂಡ ಈ ನಿರ್ಧಾರವು ಪಕ್ಷದಿಂದ ಉಚ್ಚಾಟಿತ ತಮಗೆ ಅನ್ವಯಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದೆಡೆ ಬಿಜೆಪಿಗೆ ಮರಳುವುದಿಲ್ಲವೆಂಬ ಇಂಗಿತ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಅವರ ಸ್ನೇಹಿತರು ಬಿಜೆಪಿ ವರಿಷ್ಠರ ಮನವೊಲಿಸಿ ಪಕ್ಷಕ್ಕೆ ವಾಪಸ್ ಕರೆತರಲು ಪ್ರಯತ್ನಿಸುತ್ತಿದ್ದಾರೆ.

ಹಿಂದುಗಳ ಹಿತಕ್ಕಾಗಿ ಪ್ರತ್ಯೇಕ ಪಕ್ಷ ಸ್ಥಾಪಿಸುವುದಾಗಿ ಯತ್ನಾಳ್ ಹೇಳಿಕೆ ನೀಡಿದ ಬೆನ್ನಲ್ಲೇ ಆಪ್ತರಲ್ಲಿ ಒಬ್ಬರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಂತಹದ್ದೇನಿಲ್ಲ. ಯತ್ನಾಳ್‌ರನ್ನು ಪಕ್ಷಕ್ಕೆ ಮತ್ತೆ ಕರೆ ತರುತ್ತೇವೆ ಎಂದು ಹೇಳುತ್ತಾರೆ.

ಕೆಣಕಲು ಪ್ರಯತ್ನ

ಸಮಿತಿ ಸಭೆಯ ನಂತರ ಯತ್ನಾಳ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ವಕ್ಫ್ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಇನ್ನು ಮುಂದೆ ಕಂಡದ್ದನ್ನು ವಕ್ಫ್ ಆಸ್ತಿ ಎಂದು ೋಷಿಸಿಕೊಳ್ಳುವುದಕ್ಕೆ ಕಡಿವಾಣ ಬೀಳಲಿದೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಕುಟುಂಬನವರ ಕುಟುಂಬ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತವಾಗುವ ತನಕ ಬಿಜೆಪಿಗೆ ಮರುಳುವುದಿಲ್ಲ ಎಂದ ಯತ್ನಾಳ್, ಬಿಎಸ್‌ವೈ, ವಿಜಯೇಂದ್ರ ವಿರುದ್ಧ ವೈಯಕ್ತಿಕ ಆರೋಪ, ದಾಳಿ ಮುಂದುವರಿಸಿದರು. ಇಬ್ಬರಿಗೂ ಸವಾಲೆಸೆದು ಕೆಣಕಲು ಪ್ರಯತ್ನಿಸಿದರು.