ಬೆಂಗಳೂರು: ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ಭೋಜನಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಭಿನ್ನಮತೀಯ ಚಟುವಟಿಕೆಗೆ ನಿನ್ನೆ ಚಾಲನೆ ನೀಡಿದ ನಂತರ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಒಂದೊಂದೇ ಸಂಗತಿಗಳು ಹೊರಬರತೊಡಗಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕರೆದರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎರಡು ದಿನ ಬಾರದೇ ಸಿಎಂ ಅವರನ್ನು ಕಾಯಿಸಿದ ಪ್ರಸಂಗ ಬೆಳಕಿಗೆ ಬಂದಿದೆ.
ಯತ್ನಾಳ್ ಅವರು ತಮ್ಮ ಕ್ಷೇತ್ರಕ್ಕೆ ಅನುದಾನ ನೀಡುವುದಕ್ಕೆ ಸಂಬಂಧಿಸಿದ ಮನವಿಯನ್ನು ಕೆಲವು ದಿನಗಳ ಹಿಂದೆ ಸಿಎಂಗೆ ಸಲ್ಲಿಸಿದ್ದರು. ಸಿಎಂ ಕೂಡ ಆ ಮನವಿಯ ಮೇಲೆ ಸಕಾರಾತ್ಮಕವಾದ ಷರಾ ಬರೆದು, ಅನುದಾನ ಬಿಡುಗಡೆಗೆ ಸೂಚಿಸಿದ್ದರು. ಆದರೆ ಈವರೆಗೆ ಅನುದಾನ ಬಿಡುಗಡೆ ಆಗಲೇ ಇಲ್ಲ. ಇದರಿಂದ ಯತ್ನಾಳ್ ಸಿಟ್ಟಾಗಿದ್ದರು. ಅವರನ್ನು ಸಮಾಧಾನಪಡಿಸಲು ಕೆಲವು ಅಧಿಕಾರಿಗಳು ಫೋನ್ ಮಾಡಿದ್ದರು. ಸದ್ಯದಲ್ಲೇ ಅನುದಾನ ಬಿಡುಗಡೆ ಮಾಡುವುದಾಗಿಯೂ, ಸಂಬಂಧಪಟ್ಟ ಕಾಗದಪತ್ರಗಳನ್ನು ಇನ್ನೊಮ್ಮೆ ಸಲ್ಲಿಸುವಂತೆಯೂ ಕೋರಿದ್ದರು. ಆದರೆ ಪದೇಪದೆ ಕಾಗದಪತ್ರ ಸಲ್ಲಿಸಲು ತಾವು ಸಿದ್ಧರಿಲ್ಲ, ಅನುದಾನ ಕೊಡ್ತಿದ್ರೆ ಕೊಡಿ, ಬಿಡ್ತಿದ್ರೆ ಬಿಡಿ ಎಂದು ಯತ್ನಾಳ್ ಖಡಕ್ಕಾಗಿ ತಿಳಿಸಿದ್ದರು.
ಈ ವಿಷಯ ಸಿಎಂ ಗಮನಕ್ಕೆ ಬರುತ್ತಿದ್ದಂತೆಯೇ ಅವರೇ ಯತ್ನಾಳ್ ಅವರನ್ನು ಭೇಟಿಗೆ ಕರೆದರು. ಎರಡು ದಿನ ಯಡಿಯೂರಪ್ಪ ಕಾವೇರಿ ನಿವಾಸದಲ್ಲಿ ಕಾದಿದ್ದರೂ, ಯತ್ನಾಳ್ ಮಾತ್ರ ಈಗ ಬರುವೆ, ನಂತರ ಬರುವೆ ಎಂದು ಸತಾಯಿಸಿದ್ದರು. ಯತ್ನಾಳ್ ನಡವಳಿಕೆಗೆ ಸಿಟ್ಟಾಗಿ ಸಿಎಂ ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ವಿಷಯ ಗೊತ್ತಾಗಿ ಸ್ವಪಕ್ಷೀಯರು ಸಿಎಂ- ಯತ್ನಾಳ್ ನಡುವೆ ಸಂಧಾನಕ್ಕೆ ಪ್ರಯತ್ನ ಮಾಡಿದ್ದರೂ ಯತ್ನಾಳ್ ಹಠಮಾರಿತನದಿಂದಾಗಿ ಪ್ರಯೋಜನವಾಗಿರಲಿಲ್ಲ. ಗುರುವಾರ ಮತ್ತೆ ಇನ್ನೊಂದು ಬಾರಿ ಮಾತುಕತೆಗೆ ಸಿಎಂ ಆಹ್ವಾನ ಕೊಟ್ಟಿದ್ದರು. ‘ಎಲ್ಲ ಮುಗಿದು ಹೋಗಿದೆ, ನಾನು ಬರಲ್ಲ’ ಎಂದು ಯತ್ನಾಳ್ ಸಂದೇಶ ರವಾನೆ ಮಾಡಿದರೆಂದು ಗೊತ್ತಾಗಿದೆ.