ನ್ಯೂಸ್

ಗ್ಯಾರಂಟಿಗಳ ವಿರುದ್ಧ ಕೇಂದ್ರ ಹಣಕಾಸು ಸಚಿವೆಗೆ ಯತ್ನಾಳ್ ದೂರು

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಉಚಿತ ಯೋಜನೆಗಳಿಂದ ವಾರ್ಷಿಕವಾಗಿ 60 ಸಾವಿರ ಕೋಟಿ ರೂ.ಗಳ ಆರ್ಥಿಕ ಹೊರೆಯಾಗುತ್ತಿದೆ. ದೊಡ್ಡಪ್ರಮಾಣದ ಈ ವೆಚ್ಚ ಆರ್ಥಿಕ ಸಂಕಷ್ಟ ತಂದೊಡ್ಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ದೂರಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬುಧವಾರ ಭೇಟಿ ಮಾಡಿ, ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆ ಸಲ್ಲಿಸಿದ ವರದಿ ಸಹಿತ ದೂರರ್ಜಿ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳ ವೆಚ್ಚಗಳು ರಾಜ್ಯಕ್ಕೆ ಆರ್ಥಿಕ ದಿವಾಳಿತನ ಹೇಗೆ ತರುತ್ತವೆ ಎನ್ನುವುದಕ್ಕೆ ಹಣಕಾಸು ಇಲಾಖೆಯ ವರದಿಯೇ ನಿದರ್ಶನವೆಂದು ಸಮಜಾಯಿಷಿ ನೀಡಿದ್ದಾರೆ.

ತಾಳ್ಮೆಯಿಂದ ಎಲ್ಲವನ್ನೂ ಆಲಿಸಿ, ವಿವರಗಳನ್ನು ಪರಿಶೀಲಿಸಿದ ನಿರ್ಮಲಾ ಸೀತಾರಾಮನ್, ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಯತ್ನಾಳ್ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.