ನ್ಯೂಸ್

ಅಪಾರ ಹಣ ಪತ್ತೆ ಆರೋಪ: ನ್ಯಾಯಮೂರ್ತಿ ಯಶವಂತ್​ ವರ್ಮಾ ಕೆಲಸದಿಂದ ವಜಾ! Delhi

Delhi | ವಾಸದ ಮನೆಯಲ್ಲಿ ಆದಾಯಕ್ಕೂ ಮೀರಿ ಅಧಿಕ ಹಣ ಹೊಂದಿದ್ದ ಆರೋಪದ ಮೇಲೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನ್ಯಾಯಾಂಗ ಕೆಲಸವನ್ನು ತಕ್ಷಣವೇ ಕೈ ಬಿಡುವಂತೆ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದ ನಂತರ ಅರ್ಧಂಬರ್ಧ ಸುಟ್ಟ ನಗದು ಬಂಡಲ್‌ಗಳು ಪತ್ತೆಯಾಗಿರುವ ಕುರಿತು ಸುಪ್ರೀಂ ಕೋರ್ಟ್ ವರದಿಯನ್ನು ಬಿಡುಗಡೆ ಮಾಡಿತ್ತು. ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ ಎಂಬ ಆರೋಪಗಳ ಕುರಿತು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಸುಮಾರು 25 ಪುಟಗಳ ವರದಿಯನ್ನು ಸುಪ್ರೀಂ ಕೋರ್ಟ್ ಸಿಜೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಸಲ್ಲಿಸಿದರು. ಪ್ರಾಥಮಿಕ ಸಾಕ್ಷ್ಯಗಳ ಆಧಾರದ ಮೇಲೆ, ಈ ವಿಷಯದ ಬಗ್ಗೆ ಹೆಚ್ಚು ಆಳವಾದ ತನಿಖೆ ನಡೆಯುತ್ತಿದ್ದು, ಇದೀಗ ನ್ಯಾಯಮೂರ್ತಿ ಯಶವಂತ್​ ವರ್ಮಾ ಅವರಿಂದ ನ್ಯಾಯಾಂಗ ನಿರ್ವಹಣೆಯ ಕೆಲಸವನ್ನು ದೆಹಲಿ ಹೈಕೋರ್ಟ್​ ವಾಪಸ್​ ತೆಗೆದುಕೊಂಡಿದೆ.

ಈ ಸಂಬಂಧ ದೆಹಲಿ ಹೈಕೋರ್ಟ್ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ನಿರ್ವಹಿಸುತ್ತಿದ್ದ ಕೆಲಸವನ್ನು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಹಾಗೂ ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರು ನಿರ್ವಹಿಸುವಂತೆ ಆದೇಶಿಸಲಾಗಿದೆ.

ಶನಿವಾರ (22) ರಂದು ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (CJ) ದೇವೇಂದ್ರ ಕುಮಾರ್ ಉಪಾಧ್ಯಾಯ ಅವರ ವಿಚಾರಣಾ ವರದಿಯನ್ನು ಬಿಡುಗಡೆ ಮಾಡಿತ್ತು. ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸಂಜೀವ್ ಖನ್ನಾ ಮತ್ತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಅವರಿಗೆ ಸುಟ್ಟು ಹೋದ ನೋಟಿನ ವಿಡಿಯೋವನ್ನು ತೋರಿಸಿದ್ದರು.

ಸಮಗ್ರ ವರದಿಯ ನಂತರ ಸಂಜೀವ್​ ಖನ್ನಾ (ಸಿಜೆಐ) ಅವರು ದೆಹಲಿ ಹೈಕೋರ್ಟ್ ಸಿಜೆ ಉಪಾಧ್ಯಾಯ ಅವರನ್ನು ನ್ಯಾಯಮೂರ್ತಿ ವರ್ಮಾ ಅವರಿಂದ ನ್ಯಾಯಾಂಗ ಕೆಲಸವನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದ್ದರು. ಈ ಎಲ್ಲಾ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನ್ಯಾಯಾಂಗ ಕೆಲಸವನ್ನು ತಕ್ಷಣವೇ ಕೈ ಬಿಡುವಂತೆ ಹಾಗೂ ಮುಂದಿನ ಆದೇಶದವರೆಗೆ ಹಿಂತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.

ಇನ್ನೂ ನ್ಯಾಯಮೂರ್ತಿ ವರ್ಮಾ ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ನನ್ನ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಹೊರಿಸುವ ಮೂಲಕ ನನಗೆ ಅವಮಾನ ಮಾಡಲಾಗುತ್ತಿದೆ ಎಂದು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.