ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ವರ್ಷದ ಬಹುನಿರೀತ ಸಿನಿಮಾ "ರಾಮಾಯಣ'. ಫಸ್ಟ್ ಲುಕ್ ಪೋಸ್ಟರ್ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದರೂ, ನಂತರ ಬಂದ ಟೀಸರ್ ಮತ್ತು ಲೀಕ್ ಆದ ಕೆಲ ದೃಶ್ಯಗಳ ವಿಎಫ್ಎಕ್ಸ್ ಬಗ್ಗೆ ಚರ್ಚೆಗಳು ನಡೆದವು. ಆದರೆ, ಇದೇ ಶುಕ್ರವಾರ (ಜು. 24) ಬಿಡುಗಡೆಯಾಗಲಿರುವ "ರಾಮಾಯಣ' ಟ್ರೇಲರ್, ಆ ಎಲ್ಲ ಚರ್ಚೆಗಳಿಗೆ ಬ್ರೇಕ್ ಹಾಕಲಿದೆ. ಏಕೆಂದರೆ ಶನಿವಾರ (ಜು. 17) ಭಾರತದಾದ್ಯಂತ ಆಯ್ದ ಕೆಲ ಪತ್ರಕರ್ತರು, ರಾಜಕಾರಣಿಗಳು, ಸಿನಿಮಾ, ಕ್ರೀಡಾ ಲೋಕದ ತಾರೆಯರಿಗೆ "ಪ್ರಥಮ ಸಂಕಲ್ಪ' ಹೆಸರಿನಲ್ಲಿ ಟ್ರೇಲರ್ನ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. 4.15 ನಿಮಿಷಗಳ ಟ್ರೇಲರ್ ಹೊಸ ಪ್ರಪಂಚವನ್ನು ಸೃಷ್ಟಿಸಿದೆ. ಭಾರತೀಯ ಪೌರಾಣಿಕ, ಸಾಂಸತಿಕ ರಾಯಭಾರಿಯಾಗಿ "ರಾಮಾಯಣ' ವಿಶ್ವಕ್ಕೆ ಪರಿಚಯವಾಗಲಿದೆ. ಅಂತಹ ಅದ್ಭುತ ದೃಶ್ಯವೈಭವ ಟ್ರೇಲರ್ನಲ್ಲಿ ಅನಾವರಣವಾಗಿದೆ. ರಣಬೀರ್ ಕಪೂರ್ (ರಾಮ), ಸಾಯಿಪಲ್ಲವಿ (ಸೀತೆ), ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ) ಜತೆ ಅರುಣ್ ಗೋವಿಲ್ (ದಶರಥ), ರವಿ ದುಬೆ (ಲಕ್ಷ$್ಮಣ), ರಕುಲ್ ಪ್ರೀತ್ ಸಿಂಗ್ (ಶೂರ್ಪನಖಿ), ಶೋಭನಾ, ಕುಣಾಲ್ ಕಪೂರ್, ಅಜಿಂಕ್ಯ ದೇವ್ ಸೇರಿ ಹಲವು ಟಾನುಟಿ ಕಲಾವಿದರು "ರಾಮಾಯಣ'ದಲ್ಲಿ ನಟಿಸಿದ್ದಾರೆ. ಅಮಿತ್ ಮಲ್ಹೋತ್ರಾ ಅವರ ಪೆಮ್ ೋಕಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹ್ಮಾನ್ ಸಂಗೀತ ನೀಡಿದ್ದಾರೆ. ಇದೇ ದೀಪಾವಳಿ ಹಬ್ಬಕ್ಕೆ "ರಾಮಾಯಣ' ಮೊದಲ ಭಾಗ ತೆರೆಗೆ ಬರಲಿದ್ದು, 2027ರ ದೀಪಾವಳಿಗೆ ಸೀಕ್ವೆಲ್ ರಿಲೀಸ್ ಆಗಲಿದೆ.
ಸಿನಿಮಾ ವಿಷಯದಲ್ಲೂ ನಾವು ಹಿಂದೆ ಉಳಿದಿಲ್ಲ:
ನಿರ್ಮಾಪಕ ನಮಿತ್ ಮಲ್ಹೋತ್ರಾ, ಡಿಎನ್ಇಜಿ ಎಂಬ ವಿಎ್ಎಕ್ಸ್ ಕಂಪನಿ ನಡೆಸುತ್ತಿದ್ದು, ಇದುವರೆಗೆ ಅತ್ಯುತ್ತಮ ವಿಎ್ಎಕ್ಸ್ಗಾಗಿ ಎಂಟು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದ ಬಗ್ಗೆ, ""ರಾಮಾಯಣ'ದ 300ಕ್ಕೂ ಹೆಚ್ಚು ಅವತರಣಿಕೆಗಳಿವೆ. ಆ ಎಲ್ಲವುಗಳಿಂದ ಸ್ಫೂರ್ತಿ ಪಡೆದು ನಂಬುವವರು, ನಂಬದವರು ಎಲ್ಲರಿಗೂ ಕನೆಕ್ಟ್ ಆಗುವಂತಹ ಚಿತ್ರ ಮಾಡಿದ್ದೇವೆ. ವಿದೇಶಗಳಲ್ಲಿ ಭಾರತೀಯ ವೈದ್ಯರು, ತಂತ್ರಜ್ಞರು, ಆರ್ಥಿಕ ತಜ್ಞರಿಗೆ ತುಂಬ ಗೌರವವಿದೆ. ಆದರೆ, ಸಿನಿಮಾಗಳ ಬಗ್ಗೆ ಅವರಿಗೆ ಹೆಚ್ಚು ಗೊತ್ತಿಲ್ಲ. ಈ ಸಿನಿಮಾ ವಿಶ್ವಾದ್ಯಂತ ಜನ ಭಾರತೀಯ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಲಿದೆ' ಎಂದು ಭರವಸೆ ವ್ಯಕ್ತಪಡಿಸಿದರು.
ನಾನು ಆಯ್ಕೆ ಮಾಡಿದ್ದಲ್ಲ...
"ದಂಗಲ್' ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ, ""ರಾಮಾಯಣ' ಸಿನಿಮಾ ನಾನು ಆಯ್ಕೆ ಮಾಡಿಕೊಂಡಿಲ್ಲ. ಅದೇ ನನ್ನನ್ನು ಆಯ್ಕೆ ಮಾಡಿಕೊಂಡಿದ್ದು ನನ್ನ ಅದೃಷ್ಟ. ಈ ಪಯಣ ಸರಳವಾಗಿರಲಿಲ್ಲ. ಆದರೆ, ಈ ಜರ್ನಿಯಲ್ಲಿ ಪ್ರಭು ಶ್ರೀರಾಮನ ಬಗ್ಗೆ ತುಂಬ ವಿಷಯಗಳನ್ನು ತಿಳಿದ ನೆಮ್ಮದಿ, ಖುಷಿಯಿದೆ. ಪುರಾಣವನ್ನು ಹೊಸ ತಂತ್ರಜ್ಞಾನದ ಮೂಲಕ ಹೊಸ ರೀತಿ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಶ್ರೀರಾಮ ತಾಡಾಸುರನನ್ನು ಹೇಗೆ ಕೊಂದರು? ವಾಯು& ಸುಗ್ರೀವರು ಹೇಗೆ ಕಾಣಿಸುತ್ತಿದ್ದರು? ಕಿಷ್ಕಿಂಧೆ ನೋಡಲು ಎಷ್ಟು ಸುಂದರವಾಗಿತ್ತು? ಅದನ್ನು ಯಾರೂ ನೋಡಿಲ್ಲ. ಅದನ್ನೆಲ್ಲ ಹೊಸ ರೀತಿ ತೋರಿಸಿದ್ದೇವೆ' ಎಂದು ಹೇಳಿಕೊಂಡರು.
ಭಾರತದ ಅತಿ ದೊಡ್ಡ ಸಿನಿಮಾ
ಜನಪ್ರಿಯ "ರಾಮಾಯಣ' ಧಾರಾವಾಹಿಯ ರಾಮನ ಪಾತ್ರಧಾರಿ ಅರುಣ್ ಗೋವಿಲ್, ಈ ಹೊಸ "ರಾಮಾಯಣ'ದಲ್ಲಿ ರಾಜ ದಶರಥರ ಪಾತ್ರದಲ್ಲಿ ನಟಿಸಿದ್ದು, ""ರಾಮಾಯಣ'ದ ಬಗ್ಗೆ ಒಬ್ಬೊಬ್ಬರದು ಒಂದೊಂದು ರೀತಿಯ ಅಭಿಪ್ರಾಯ ಇರಬಹುದು. ಆದರೆ, ಮರ್ಯಾದಾ ಪುರುಷೋತ್ತಮ ರಾಮನ ಬಗ್ಗೆ, ಅವರ ಮೌಲ್ಯ, ರಾಮತ್ವದ ಬಗ್ಗೆ ಒಂದೇ ಅಭಿಮತವಿರುತ್ತದೆ. ದೊಡ್ಡ ಸಿನಿಮಾಗಳ ಶೂಟಿಂಗ್ ಸಮಯದಲ್ಲಿ ನಾನಾ ರೀತಿಯ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಆದರೆ, ಈ ಚಿತ್ರದ ಚಿತ್ರೀಕರಣದ ವೇಳೆ ಒಂದೂ ಸಮಸ್ಯೆಯಾಗಿಲ್ಲ. ಏಕೆಂದರೆ, ಇದು ರಾಮನ ಕಥೆ. ಹಾಲಿವುಡ್ಗೆ ಸಮ ಇರುವ, ಭಾರತದ ಮಟ್ಟಿಗೆ ಅತಿ ದೊಡ್ಡ ಚಿತ್ರವಿದು' ಎಂದರು.
ಬಾಲ್ಯದ ಭಾಗ, ಇದೇ ಸೌಭಾಗ್ಯ
ಬಾಲಿವುಡ್ ನಟ ರಣಬೀರ್ ಕಪೂರ್, "ಬಾಲ್ಯದಿಂದಲೂ ರಾಮಾಯಣ ಕಥೆ ಕೇಳಿಕೊಂಡು, ಧಾರಾವಾಹಿ ನೋಡಿಕೊಂಡು ಬೆಳೆದವನು ನಾನು. ರಾಮನ ಆಶೀರ್ವಾದದ ಜತೆ ನಿಮ್ಮ ಮೂಲಕ ರಾಮನನ್ನು ನೋಡಿದ್ದೇನೆ. ಆ ಪಾತ್ರವನ್ನು ಇದೀಗ ನಾನು ಮಾಡಿರುವುದು ಅದೃಷ್ಟ' ಎಂದರು. ಸೀತಾಮಾತೆ ಪಾತ್ರಧಾರಿ ಸಾಯಿ ಪಲ್ಲವಿ, "ದೇವರು, ದೇವಿಯ ಪಾತ್ರಗಳು ಸಿಗುವುದು, ನಟಿಸುವುದು ಎರಡೂ ಈಜಿ ಅಲ್ಲ. ಇದು ಇತಿಹಾಸದ ಪುಟಗಳಲ್ಲಿ ಸೇರುವ ಚಿತ್ರವಾಗಲಿದೆ. ಸಿನಿಮಾ ಶೂಟಿಂಗ್ ಸಮಯದಲ್ಲಿ ನಾನು ಧ್ಯಾನ ಮಾಡುತ್ತಾ ಸೀತಮ್ಮ, ನೀನೇ ಬಂದು ನನ್ನನ್ನು ನಟಿಸುವಂತೆ ಮಾಡು ಎಂದು ಕೇಳಿಕೊಳ್ಳುತ್ತಿದ್ದೆ' ಎಂದು ಹೇಳಿಕೊಂಡರು. ಲಕ್ಷ$್ಮಣ ಪಾತ್ರಧಾರಿ ರವಿ ದುಬೆ, ಪಾತ್ರಕ್ಕೆ ಆಯ್ಕೆಯಾದ ಕ್ಷಣದಿಂದ ಈಗಲೂ ರಣಬೀರ್ರನ್ನು ಅಣ್ಣ ಮತ್ತು ಸಾಯಿಪಲ್ಲವಿಯನ್ನು ಸೀತಾಮಾತೆ ಎಂದೇ ಗೌರವಿಸುತ್ತಾರಂತೆ. "ನನ್ನ ಜೀವನದ ಸೌಭಾಗ್ಯ. ನನ್ನ ಅಪ್ಪ, ಅಮ್ಮ, ಪೂರ್ವಜರ ಪುಣ್ಯ ಕೆಲಸಗಳಿಂದಲೇ ನನಗೆ ಈ ಸಿನಿಮಾದಲ್ಲಿ, ಇಂತಹ ದಿಗ್ಗಜರ ಜತೆ ನಟಿಸುವ ಅವಕಾಶ ದೊರೆಯಿತು' ಎಂದು ಸಂತಸ ಹಂಚಿಕೊಂಡರು.
ರಾಮರಾಜ್ಯದಲ್ಲಿ "ರಾವಣ'ನ ಕ್ರೇಜ್!
ಇನ್ನು "ರಾಮಾಯಣ' ಟ್ರೇಲರ್ ಬಿಡುಗಡೆಯ ಬಳಿಕ ನಟ ಯಶ್ ವೇದಿಕೆಗೆ ವಿಶೇಷ ಎಂಟ್ರಿ ಕೊಟ್ಟರು. ನೂರಾರು ಜನರ ಚಪ್ಪಾಳೆ, ಘೋಷಣೆಗಳು ಪ್ರತಿಧ್ವನಿಸಿದ್ದು, ಉತ್ತರ ಭಾರತದಲ್ಲೂ ಯಶ್ಗಿರುವ ಅಪಾರ ಅಭಿಮಾನಿ ಬಳಗದ ಅನಾವರಣ ಮಾಡಿತು. "ಎಲ್ಲರಿಗೂ ನಮಸ್ಕಾರ' ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಯಶ್, "ಈ ಅದ್ಭುತ ಸಿನಿಮಾದ ಭಾಗವಾಗಿರುವುದು ತುಂಬ ಖುಷಿ ನೀಡಿದೆ. ನಿರ್ಮಾಪಕ ಅಮಿತ್ ಅವರೇ ನನಗೆ ರಾವಣ ಪಾತ್ರದಲ್ಲಿ ನಟಿಸಲು ತಿಳಿಸಿದರು. ಈ ಸಿನಿಮಾ ಭಾರತದ ಕನಸು. ವಿಶ್ವದ ಮುಂದೆ ನಮ್ಮ ಕಥೆ, ಪ್ರಭು ಶ್ರೀರಾಮರ ಕಥೆಯನ್ನಿಡುವ ಒಂದೇ ಉದ್ದೇಶದೊಂದಿಗೆ ಎಲ್ಲರೂ ಕೈಜೋಡಿಸಿದ್ದೇವೆ' ಎಂದರು.