ನ್ಯೂಸ್

ಸದ್ಯದಲ್ಲೇ ಓದುಗರ ಕೈ ಸೇರಲಿದೆ ಯಂಡಮೂರಿ ವಿರೇಂದ್ರನಾಥ್ ಹೊಸ ಕಾದಂಬರಿ ‘ಮೈ ಲವ್ ಸ್ಟೋರಿ ವಿತ್ ಡೆವಿಲ್’

ಬೆಂಗಳೂರು: 1990ರ ದಶಕದಲ್ಲಿ ಬಿಡುಗಡೆಯಾದ ಬೆಳದಿಂಗಲ ಬಾಲೆ ಸಿನಿಮಾ ಇಂದಿಗೂ ಪ್ರೇಕ್ಷಕರ ಸ್ಮತಿಪಟಲದಲ್ಲಿ ಉಳಿದೇ ಇರುತ್ತೆ. ಈ ಸಿನಿಮಾ ಮೂಲತಃ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ತೆಲುಗು ಭಾಷೆಯ ‘ವೆನೆನ್ನೋ ಅಡಪಿಲ್ಲಾ’ ಎಂಬ ಕತೆಯನ್ನೇ ಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸಿನಿಮಾ ಮಾಡಿ ಗೆದ್ದಿದ್ದರು.

ಒಬ್ಬ ಬರಹಗಾರನಾಗಿ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನರಿಗೆ ಸಿನಿಮಾ ಮಾಡಿ ಗೆದ್ದಿದ್ದರು. ಅಂತಹ ಯಂಡಮೂರಿ ಅವರು ಲೆಕ್ಕ ಪರಿಶೋಧಕನಾಗಿ (ಸಿಎ) ‘ದುಡ್ಡು ಮಾಡುವುದು ಹೇಗೆ’, ‘ಮೈಂಡ್ ಪವರ್ ನಂ.1’ರಂತಹ ಆರ್ಥಿಕ ಕ್ಷೇತ್ರದ ಪುಸ್ತಕಗಳ ಮೂಲಕವೂ ಜನಮನ್ನಣೆ ಗಳಿಸಿರುವ ಖ್ಯಾತ ಲೇಖಕಕಾರಿದ್ದಾರೆ.

ಇಂತಹ ಜನಪ್ರಿಯ ಲೇಖಕ, ನಟ, ನಿರ್ದೇಶಕ, ನಾಟಕಕಾರ, ಕಾದಂಬರಿಕಾರ, ವ್ಯಕ್ತಿತ್ವ ವಿಕಸನ ತರಬೇತುದಾರರೂ ಆಗಿರುವ ಯಂಡಮೂರಿ ವೀರೇಂದ್ರನಾಥ್ ಅವರು ತಮ್ಮ 78ನೇ ವಯಸ್ಸಿನಲ್ಲೂ ಯುವಕರಂತೆ ಕ್ರಿಯಾಶೀಲರಾಗಿದ್ದಾರೆ. ‘ಮೈ ಲವ್ ಸ್ಟೋರಿ ವಿತ್ ಡೆವಿಲ್’ ಎಂಬ ಪುಸ್ತಕ ರಚನೆಯಲ್ಲಿ ತೊಡಗಿದ್ದು, ಶೀಘ್ರದಲ್ಲಿಯೇ ಈ ನೂತನ ಕೃತಿ ಓದುಗರ ಕೈಸೇರಲಿದೆ.

ಶನಿವಾರ ಬಸವನಗುಡಿಯಲ್ಲಿರುವ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ತಮ್ಮ ಪುಸ್ತಕ ‘ಅಮೀಬಾ’ ಬಿಡುಗಡೆಗೆಂದು ಬೆಂಗಳೂರಿಗೆ ಆಗಮಿಸಿದ್ದರು. ಇದೇ ವೇಳೆ ‘ವಿಜಯವಾಣಿ’ ಕಚೇರಿಗೆ ಭೇಟಿ ನೀಡಿ ತಮ್ಮ ಬಾಲ್ಯ, ಸಿನಿಮಾರಂಗ, ವಿದ್ಯಾರ್ಹತೆ, ರಂಗಭೂಮಿ ಒಳಗೊಂಡಂತೆ ಜೀನವದ ಪ್ರಮುಖ ಘಟ್ಟಗಳು, ಹೆಸರಾಂತ ಕಾದಂಬರಿಗಳ ಬರಹಗಳನ್ನು ಸೇರಿ ಹತ್ತಾರು ವಿಚಾರಗಳನ್ನು ವಿಸ್ತಾರವಾಗಿ ಹಂಚಿಕೊಂಡಿದ್ದಾರೆ.

ನಾಟಕ ರಚನೆಗಳ ಮೂಲಕ ಬರಹ ಆರಂಭಿಸಿದ ಯಂಡಮೂರಿ, ಇದುವರೆಗೂ 75ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ 50ಕ್ಕೂ ಅಧಿಕ ಪುಸ್ತಕಗಳನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನವು ಪ್ರಕಟಿಸಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ ‘ಮೈ ಲವ್ ಸ್ಟೋರಿ ವಿತ್ ಡೆವಿಲ್’ ರಚನೆಯಾಗುತ್ತಿದೆ. ಈ ಕುರಿತು ಯಂಡಮೂರಿ ಹೇಳಿದ್ದಿಷ್ಟು....

ಬುದ್ಧಿವಂತಿಕೆಯೇ ಬೇರೆ, ಜ್ಞಾಪಕ ಶಕ್ತಿಯೇ ಬೇರೆ

ನಾನು ಶಾಲಾ ದಿನಗಳಲ್ಲಿ ಹೆಚ್ಚಿನ ಬುದ್ದಿವಂತನಲ್ಲದ ನಾನು 7ನೇ ತರಗತಿಯಲ್ಲಿ ಅನುತೀರ್ಣನಾಗಿದ್ದೆ. ಆಗ ಮನೆಯಲ್ಲಿ ಚೆನ್ನಾಗಿ ಓದದಿದ್ದರೆ ಊಟ ಹಾಕುವುದಿಲ್ಲ ಎಂದು ಕಟ್ಟಪ್ಪಣೆ ಮಾಡಿದ್ದರು. ಒಮ್ಮೆ 20ರವರೆಗೂ ಮಗ್ಗಿ ಕಲಿತು ಒಪ್ಪಿಸಬೇಕು ಎಂದು ಹೇಳಿದರು. ಆಗ ಒಂದೇ ದಿನದಲ್ಲಿ 40ರವರೆಗೆ ಮಗ್ಗಿ ಕಲಿತು ತಂದೆ ಬಳಿ ಹೋಗಿ ಹೇಳಿದರೆ. ಅವರು 23ರ ಮಗ್ಗಿ ಕೇಳಿದರು. ಆಗ ನಾನು ಅದನ್ನು ಹಿಮ್ಮುಖವಾಗಿ ಹೇಳಿದ್ದೆ. ಅದರಿಂದ ಆಶ್ಚರ್ಯಗೊಂಡ ಅವರು, ನೀನು ಬುದ್ದಿವಂತ ಇದ್ದೀಯಲ್ಲ ಎಂದು ಹೇಳಿದರು. ಅದಕ್ಕೆ ನಾನು ಬುದ್ಧಿವಂತನಲ್ಲ, ನನಗೆ ಜ್ಞಾಪಕ ಶಕ್ತಿ ಇದೆ ಎಂದು ಉತ್ತರಿಸಿದ್ದೆ. ನನ್ನ ಪ್ರಕಾರ ಬುದ್ಧಿವಂತಿಕೆಯೇ ಬೇರೆ. ಜ್ಞಾನಪ ಶಕ್ತಿಯೇ ಬೇರೆ ಎಂದರು.

ವೈದ್ಯ ಕೋರ್ಸ್ ಶುಲ್ಕಕ್ಕೆ ಹಣವಿಲ್ಲದ್ದರಿಂದ ಬಿ.ಕಾಂ ಆಯ್ಕೆ

ಹೀಗೆ ಮುಂದುವರಿದ ನನ್ನ ವಿದ್ಯಾಭ್ಯಾಸ ಪಿಯುಸಿ ವರೆಗೂ ತಲುಪಿತು. ನಂತರ ಎಂಬಿಬಿಎಸ್ ಇಲ್ಲವೆ ಇಂಜಿನಿಯರಿಂಗ್ ಸೇರಬೇಕಿತ್ತು. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಬಿಎಸ್‌ಸಿ ಪ್ರಯೋಗಾಲಯದ ಶುಲ್ಕ ತುಂಬಲು ಸಹ ಹಣವಿರಲಿಲ್ಲ. ಅಂತಿಮವಾಗಿ ಬಿ.ಕಾಂ.ಗೆ ಸೇರಿದೆ. ನಂತರ ಎಂ.ಕಾಂ.ಮುಗಿಸಿ ಸಿಎ ಮಾಡಿದೆ. 28ನೇ ವಯಸ್ಸಿಗೇ ಸ್ಟೇಟ್ ೈನ್ಯಾನ್ಸ್ ಕಾರ್ಪೊರೇಷನ್‌ನಲ್ಲಿ ಕೆಲಸಕ್ಕೆ ಸೇರಿದೆ. ಕೆಲ ಸಮಯದ ನಂತರದ ಕೆಲಸದ ಒತ್ತಡದಿಂದ ಬಿಡುಗಡೆ ಪಡೆಯಲು ಬರವಣಿಗೆ ಆರಂಭಿಸಿದೆ. ಆರಂಭದಲ್ಲಿ 5 ವರ್ಷಗಳ ಕಾಲ ನಾಟಕಗಳ ರಚನೆಯಲ್ಲಿ ತೊಡಗಿದೆ. ಅದಕ್ಕೆ ಗಿರೀಶ್ ಕಾರ್ನಾಡರ ‘ಹಯವದನ’ ಹಾಗೂ ಶಿವರಾಮ ಕಾರಂತರ ‘ಚೋಮನ ದುಡಿ’ ನಾಟಕಕಳು ಸ್ಫೂರ್ತಿಯಾಗಿದ್ದವು. ಹೀಗೆ ಆರಂಭವಾದ ಬರವಣಿಗೆ ನನ್ನನ್ನು ಚಲನಚಿತ್ರ ಕ್ಷೇತ್ರಕ್ಕೆ ಕೊಂಡೊಯ್ದಿತು ಎಂದು ಹೇಳಿದರು.

ಚಲನಚಿತ್ರಗಳಾದ ಕೃತಿಗಳು:

ನನ್ನ ‘ತುಳಸಿ ದಲಂ’ ಕಾದಂಬರಿಯು ’ಕಾಶ್ಮೋರಾ’ ಎಂದು ತೆಲುಗು ಚಲನಚಿತ್ರವಾಗಿ ಯಶಸ್ಸು ಕಂಡಿತು. ಇದು ನನಗೆ ರಾಷ್ಟ್ರವ್ಯಾಪಿ ಮನ್ನಣೆ ದೊರಕಿಸಿಕೊಟ್ಟಿರು. ಇದಲ್ಲದೆ ಅಭಿಲಾಷಾ, ಚಾಲೆಂಜ್ 1984, ಆಖಾರಿ ಹೋರಾಟಂ, ಮುತ್ಯಮಂತ ಮುದ್ದು, ರಕ್ತಾಭಿಷೇಕಂ, ಸ್ಟೂವರ್ಟ್‌ಪುರಂ ಪೊಲೀಸ್ ಠಾಣೆ, ರಾಕ್ಷಸುಡು, ಮರಣ ಮೃದಂಗಂ ಸೇರಿ ನನ್ನ 18 ಕಾದಂಬರಿಗಳು ಚಲನಚಿತ್ರಗಳಾಗಿ ಯಶಸ್ಸು ಕಂಡಿವೆ.

‘ವೆನ್ನೆಲ್ಲೊ ಅಡಪಿಲ್ಲ’ ಎಂಬ ಕೃತಿಯು ಕನ್ನಡದಲ್ಲಿ ‘ಬೆಳದಿಂದಲ ಬಾಳೆ’ ಚಿತ್ರವಾಗಿ ನನಗೆ ಹೆಸರು ತಂದು ಕೊಟ್ಟಿತು. ಇದನ್ನು ವಂಶಿ ಅವರು ಕನ್ನಡಕ್ಕೆ ಅನುವಾದಿಸಿದ್ದರು. ಇದರೊಂದಿಗೆ ನನ್ನ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡವು. ಅವುಗಳಲ್ಲಿ 50 ಕೃತಿಗಳನ್ನು ಸಾಹಿತ್ಯ ಪ್ರಕಾಶನವೇ ಪ್ರಕಟಿಸಿದೆ ಎಂದು ತಿಳಿಸಿದರು.

ಚಿರಂಜೀವಿ ಒಡನಾಟದಿಂದ ಸುಧಾರಿಸಿದ ಹಣಕಾಸು ಪರಿಸ್ಥಿತಿ

ನನ್ನ ಕಾದಂಬರಿ ಚಿತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಟ ಚಿರಂಜೀವಿ ಅಭಿನಯಿಸಿದ್ದಾರೆ. ಅವರ ಒಡನಾಟದಿಂದ ನನಗೆ ಆರ್ಥಿಕ ಸ್ಥಿತಿ ಮೇಲ್ಮಟ್ಟಕ್ಕೆ ಏರಲು ಆರಂಭವಾಯಿತು. ಹಾಗಾಗಿ ಕೆಲವೇ ವರ್ಷಗಳಲ್ಲಿ ಉದ್ಯೋಗ ತೊರೆದು, ಪೂರ್ಣವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ನಂತರದಲ್ಲಿ ನನ್ನ ಕಾದಂಬರಿಗಳನ್ನು ಅನುವಾದ ಮಾಡಲು ಕನ್ನಡ, ಹಿಂದಿ ಸೇರಿ ಅನೇಕ ಭಾಷೆಗಳ ಅನುವಾದಕರು ಮುಂದೆ ಬಂದರು. ನನ್ನ ಕೃತಿಗಳ ಅನುವಾದದಿಂದ ಅವರು ಬಹಳಷ್ಟು ಲಾಭ ಮಾಡಿಕೊಂಡಿದ್ದಾರೆ. ಆದರೆ ಅದರಿಂದ ನನಗೆ ದೊರೆತ ರಾಯಲ್ಟಿ ಮಾತ್ರ ಅಲ್ಪವಾಗಿತ್ತು ಎಂದು ಹೇಳಿದರು.

5ನೇ ಪುಸ್ತಕ ಮುದ್ರಣಕ್ಕೆ ಮುಂದೆ ಬಂದ ಬೈಂಡರ್:

ನನ್ನ ಮೊದಲ ನಾಲ್ಕು ಪುಸ್ತಕಗಳು ಸಿದ್ದಗೊಂಡಿದ್ದರೂ, ಪ್ರಕಟಗೊಂಡಿರಲಿಲ್ಲ. 5ನೇ ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರೊಬ್ಬರ ಬಳಿ ಹೋದಾಗ ನಿರಾಕರಿಸುತ್ತಾರೆ. ಆಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಬೈಂಡರ್ ಒಬ್ಬರು, ನಾನು ಪುಸ್ತಕ ಪ್ರಕಟಿಸುತ್ತೇನೆ ಎಂದು ಮುಂದೆ ಬಂದರು. ಅದಕ್ಕೆ ನನ್ನ ಮೊದಲ ನಾಲ್ಕು ಪುಸ್ತಕಗಳನ್ನೂ ಪ್ರಕಟಿಸುವುದಾದರೆ ಈ ಪುಸ್ತಕ ಕೊಡುಗೆ ಎಂಬ ನಿಬಂಧನೆ ಹಾಕಿದೆ. ಅದಕ್ಕೆ ಒಪ್ಪಿದ ಆತ ತನ್ನ ಪತ್ನಿಯ ಮಾಂಗಲ್ಯ ಮಾರಿ ಹಣ ಹೊಂದಿಸಿ ಪುಸ್ತಕ ಪ್ರಕಟಿಸಿದರು. ಒಂದೇ ತಿಂಗಳಲ್ಲಿ ನನ್ನ ಕೃತಿಗಳು ದಾಖಲೆಯ ಮಾರಾಟ ಕಂಡವು. ಅದರಲ್ಲೂ ‘ಬೆಳದಿಂಗಳ ಬಾಲೆ’ (ವೆನ್ನೆಲ್ಲೊ ಅಡಿಪಿಲ್ಲ) ಬೆಳಗ್ಗೆ ಮುದ್ರಣಕಂಡು ಸಂಜೆಗೆ ಪೂರ್ತಿ ಮಾರಾಟವಾಗಿತ್ತು. ಇದರೊಂದಿಗೆ ನನಗೂ ಹಣ ಸೇರಲು ಆರಂಭವಾಯಿತು. ಆದರೆ 7 ವರ್ಷಗಳ ಬಳಿಕ ನನ್ನ ಪುಸ್ತಕಗಳನ್ನು ಪ್ರಕಟಿಸಿದ ಬೈಂಡರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತು. ನನ್ನ ಪುಸ್ತಕಗಳಿಗೆ ಪ್ರಾಮಾಣಿಕವಾಗಿ ನೀಡಬೇಕಿದ್ದ ರಾಯಧನವನ್ನು ನೀಡಿರಲಿಲ್ಲ ಎಂಬ ಸಂಗಿತಯು ಬೆಳಕಿಗೆ ಬಂತು. ಆತ ನನಗೆ ಮೋಸ ಮಾಡಿದ್ದ ಎಂಬ ಸತ್ಯ ಆಗಲೇ ತಿಳಿದದ್ದು ಎಂದು ಘಟನೆಗಳನ್ನು ಮೆಲುಕು ಹಾಕಿದರು.

ಬದುಕಿನ ಚೈತನ್ಯ ನೀಡಿದ ಸಾಹಿತ್ಯ

70-80ರ ದಶಕದಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರ ಬರಹ ಓದಲು ಜನರು ಕಾದು ಕುಳಿತಿರುತ್ತಿದ್ದರು. ಈ ಕುರಿತು ಸಾಹಿತಿ ಎಸ್.ಎಲ್. ಬೈರಪ್ಪ ಅವರೇ ವೇದಿಕೆಯೊಂದರಲ್ಲಿ ಹೊಗಳಿದ್ದರು. ಒಂದು ಕಾಲಘಟ್ಟದಲ್ಲಿ ಕನ್ನಡದ ಬಹಳಷ್ಟು ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಯಂಡಮೂರಿ ವೀರೇಂದ್ರನಾಥ್ ಅವರ ಲೇಖನಗಳನ್ನು ಪ್ರಕಟಿಸುವ ಮೂಲಕ ಚೇತರಿಸಿಕೊಂಡಿದ್ದವು. ತಮ್ಮ ಪ್ರತಿಗಳ ಮಾರಾಟ ಹಾಗೂ ಜನಪ್ರಿಯತೆ ಕಂಡುಕೊಳ್ಳಲು ಕಾರಣವಾಗಿತ್ತು. ಯಂಡಿಮೂರಿ ಅವರ ಸಾಹಿತ್ಯ ಬದುಕಿನ ಚೈತನ್ಯ ನೀಡುವಂತಿದ್ದವು ಎಂದು ಹೇಳಿದ್ದನ್ನು ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ ಸ್ಮರಿಸಿದರು.

ಪ್ರಕಾಶಕರಿಗೆ ವಂಚಿಸುತ್ತಿದ್ದ ಅನುವಾದಕರು

ಹಿಂದಿನ ದಿನಗಳಲ್ಲಿ ಅನುವಾದಕರು ಕೇಳಿದಷ್ಟು ಹಣಕ್ಕೆ ಯಂಡಮೂರಿ ಅವರು ತಮ್ಮ ಪುಸ್ತಕಗಳನ್ನು ನೀಡುತ್ತಿದ್ದರು. ಆದರೆ, ಅನುವಾದಕರು ತಾವು ಅನುವಾದಿಸಿದ ಪುಸ್ತಕಗಳಿಗೆ ಪ್ರಕಾಶಕರಿಂದ ಸಾಕಷ್ಟು ಹಣ ಪಡೆಯುತ್ತಿದ್ದರು. ಹಿಂದೆಲ್ಲ ಇಂತಹ ಘಟನೆಗಳು ನಡೆದಿವೆ ಎಂದು ಸುಬ್ರಮಣ್ಯ ತಮ್ಮಗಾದ ಅನುಭವಗಳನ್ನು ಹಂಚಿಕೊಂಡರು.

ನಾನು ಇಲ್ಲಿಯವರೆಗೂ ಯಂಡಮೂರಿ ವೀರೇಂದ್ರನಾಥ್ ಅವರ ಮೂರು ಕೃತಿಗಳನ್ನು ಅನುವಾದ ಮಾಡಿದ್ದು, ಎರಡು ಕೃತಿಗಳು ಪ್ರಕಟವಾಗಿವೆ. ಇನ್ನೊಂದು ಕೃತಿ ಪ್ರಕಟವಾಗಬೇಕಿದೆ. ಯಂಡಮೂರಿ ಅವರ ಕೃತಿಗಳಲ್ಲಿ ಪ್ರಾಚೀನ ಕಾಲದ ಪದ್ಯಗಳು ಕೂಡ ಬಳಕೆಯಾಗಿರುತ್ತವೆ. ಅವುಗಳನ್ನು ಕನ್ನಡಕ್ಕೆ ತರುವುದು ತೀರಾ ಕಷ್ಟದ ಸಂಗತಿ. ಕೆಲವು ಅನುವಾದಕರು ಅವುಗಳನ್ನು ಭಾಷಾಂತರ ಮಾಡವುದನ್ನೇ ಕೈಬಿಡುತ್ತಿದ್ದರು. ಇದರಿಂದ ಯಂಡಮೂರಿ ಹಾಗೂ ಕನ್ನಡ ಓದುಗರಿಗೆ ನಷ್ಟುವಾಗುತ್ತಿತ್ತು. ನಾನು ಓದುಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ. - ಗಣೇಶ ಭಟ್ಟ ಕೊಪ್ಪಲತೋಟ, ಅನುವಾದಕ