ಯಳಂದೂರು: ಪಟ್ಟಣ ಪಂಚಾಯಿತಿಯ 5ನೇ ವಾರ್ಡಿಗೆ ನಡೆದ ಉಪ ಚುನಾವಣೆಗೆ ಶನಿವಾರ ಶಾಂತಿಯುತ ಮತದಾನವಾಗಿದ್ದು, ಶೇ.72.4ರಷ್ಟು ಮತ ಚಲಾವಣೆಯಾಗಿದೆ.
ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಮತಗಟ್ಟೆಯನ್ನು ತೆರೆಯಲಾಗಿತ್ತು. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿತು. 233 ಪುರುಷರು ಹಾಗೂ 244 ಮಹಿಳೆಯರೂ ಸೇರಿದಂತೆ ಒಟ್ಟು 477 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದರು.
ಪಟ್ಟಣ ಪಂಚಾಯಿತಿಯ ಕಾಂಗ್ರೆಸ್ ಸದಸ್ಯರಾಗಿದ್ದ ಕೆ.ಮಲ್ಲಯ್ಯ ನಿಧನರಾದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯಿತು. ಕಾಂಗ್ರೆಸ್‌ನಿಂದ ಶಶಿಧರ ಹಾಗೂ ಬಿಜೆಪಿಯಿಂದ ಮಹದೇವ ಅಭ್ಯರ್ಥಿಗಳಾಗಿದ್ದಾರೆ. ಮತದಾನ ಬಳಿಕ ಮತಯಂತ್ರವನ್ನು ಭದ್ರತೆಯೊಂದಿಗೆ ಪಟ್ಟಣದ ಉಪಖಜಾನೆಯಲ್ಲಿ ಇರಿಸಲಾಗಿದೆ. ನ.26 ರಂದು ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ನಂಜುಂಡಯ್ಯ ಮಾಹಿತಿ ನೀಡಿದರು.