ಮೈಸೂರು: ಮೈಸೂರು ದಸರಾ ಕಳೆಕಟ್ಟಿದ್ದು, ದೇಶ ವಿದೇಶಗಳಿಂದ ಲಕ್ಷಾಂತರ ಜನ ಜಂಬೂಸವಾರಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ವಿಜಯದಶಮಿಯ ಸಂಪ್ರದಾಯಿಕ ಆಚರಣೆಗಳು ಮತ್ತು ಪೂಜೆ, ಮತ್ತಿತರ ಕಾರ್ಯಕ್ರಮಗಳಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆ ಅಂಗಳದಲ್ಲಿ ಮಂಗಳವಾರ ವಿಜಯಯಾತ್ರೆಯ ವಿಧಿವಿಧಾನಗಳನ್ನು ನೆರವೇರಿಸಿದರು.
ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ಮುಗಿದ ನಂತರ ಉತ್ತರ ದಿಕ್ಕಿನಲ್ಲಿರುವ ಭುವನೇಶ್ವರಿ ಅಮ್ಮನವರ ದೇಗುಲಕ್ಕೆ ವಿಜಯಯಾತ್ರೆ ಹೊರಟರು. ಬಳಿಕ ಬನ್ನಿಮರಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮಹಾಕಾಳಿಯಮ್ಮನವರ ಆಶೀರ್ವಾದ ಪಡೆದುಕೊಂಡರು.
ಅಲ್ಲಿಂದ ಹೊರಟ ಯದುವೀರ ವಿಜಯಯಾತ್ರೆ ಮುಂದುವರಿಸಿ ಅರಮನೆ ತಲುಪಿದರು. ಈ ಮೂಲಕ ರಾಜಮನೆತನದ ವಿಜಯದಶಮಿಯ ಪೂಜಾ ಕೈಂಕರ್ಯಗಳಿಗೆ ಅಂತಿಮ ತೆರೆಬಿತ್ತು.
ಸರ್ಕಾರದಿಂದ ನಾಡಹಬ್ಬವಾಗಿ ದಸರಾ ಉತ್ಸವವನ್ನು ಅಂಬಾವಿಲಾಸ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಿದರೆ, ಅರಮನೆ ಒಳಗೆ ಯದುವಂಶಸ್ಥರಿಂದಲೂ ಧಾರ್ಮಿಕ, ವಿಧಿವಿಧಾನದೊಂದಿಗೆ ದಸರಾ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.