ನವದೆಹಲಿ: ಲಡಾಖ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದ ನೇರ ಹೂಡಿಕೆಯನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರ ಇದೀಗ ಚೀನಾದೊಂದಿಗೆ ನೇರ ಸಂಪರ್ಕ ಇರುವ ಕಂಪನಿಗಳನ್ನು ಗುರುತಿಸಲು ಆರಂಭಿಸಿದೆ. ಅದರಂತೆ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ನೇರ ಸಂಪರ್ಕ ಹೊಂದಿರುವ ಕಬ್ಬಿಣದ ಅದಿರು ಕಂಪನಿಯೊಂದು ಹೊಸಪೇಟೆಯ ಬಳಿಯ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
ಭಾರತ ಮತ್ತು ಚೀನಾ ನಡುವಿನ ಅತಿದೊಡ್ಡ ಜಂಟಿ ಯೋಜನೆ ಎನಿಸಿಕೊಂಡಿರುವ ಈ ಯೋಜನೆಯು ಅಂದಾಜು 250 ಕೋಟಿ ರೂ. ಹೂಡಿಕೆಯೊಂದಿಗೆ ಕೊಪ್ಪಳದಲ್ಲಿ ಕಾರ್ಯಾರಂಭಿಸಿದೆ. ಇದಕ್ಕೆ ಕ್ಸಿಂಡಿಯಾ ಸ್ಟೀಲ್ಸ್ ಎಂಬ ಹೆಸರಿನಲ್ಲಿ ಈ ಕಂಪನಿಯನ್ನು ನಡೆಸಲಾಗುತ್ತಿದೆ. 0.8 ಮೆಟ್ರಿಕ್ ಟನ್ ಪರ್ ಆ್ಯನಂ (ಎಂಟಿಪಿಎ) ಸಾಮರ್ಥ್ಯದ ಕಬ್ಬಿಣದ ಅದಿರನ್ನು ಉಂಡೆಗಳ ರೂಪಕ್ಕೆ ತಂದು ಅದನ್ನು ಚೀನಾಕ್ಕೆ ರಫ್ತು ಮಾಡುವುದು ಈ ಕಂಪನಿಯ ಮುಖ್ಯ ಕಾರ್ಯವಾಗಿದೆ.
ಕೆಲವೇ ತಿಂಗಳ ಹಿಂದೆ ಕಾರ್ಯಾರಂಭಿಸಿರುವ ಈ ಕಂಪನಿಗೆ ಕ್ಸಿನ್ಕ್ಸಿಂಗ್ ಕ್ಯಾಥೆ ಇಂಟರ್ನ್ಯಾಷನಲ್ ಗ್ರೂಪ್ ಕಂಪನಿ ಲಿಮಿಟೆಡ್ (ಚೀನಾ) ಪ್ರಮುಖ ಹೂಡಿಕೆದಾರ ಕಂಪನಿಯಾಗಿದೆ. ಪೀಪಲ್ಸ್ ಲಿಬರೇಷನ್ ಆರ್ಮಿಯ ಜನರಲ್ ಲಾಜಿಸ್ಟಿಕ್ಸ್ ಡಿಪಾರ್ಟ್ಮೆಂಟ್ನ ಉತ್ಪಾದನಾ ವಿಭಾಗ ಮತ್ತು ಅದಕ್ಕೆ ಸಂಬಂಧಿತ ಉದ್ಯಮ ಮತ್ತು ಸಂಸ್ಥೆಗಳನ್ನು ಮರುಸಂಘಟಿಸಿ ಈ ಕಂಪನಿಯನ್ನು ಆರಂಭಿಸಲಾಗಿದೆ.
ಕ್ಸಿನ್ಕ್ಸಿಂಗ್ ಕ್ಯಾಥೆ ಇಂಟರ್ನ್ಯಾಷನಲ್ ಗ್ರೂಪ್: ಈ ಸಂಸ್ಥೆಯು ಛತ್ತೀಸ್ಗಢದಲ್ಲಿ ಅಂದಾಜು 1 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ. ರಾಜ್ಯದಲ್ಲಿ ಲಭ್ಯ ಇರುವ ಕಬ್ಬಿಣದ ಅದಿರಿನ ಪ್ರಮಾಣವನ್ನು ಆಧರಿಸಿ ಈ ಘಟಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದಿರು ನಿಕ್ಷೇಪವನ್ನು ಅಂದಾಜಿಸುವ ಸಲುವಾಗಿ ತಜ್ಞರ ನಿಯೋಗವೊಂದು ಚೀನಾದಿಂದ ಛತ್ತೀಸ್ಗಢಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಈ ಘಟಕದಲ್ಲಿ ವಾರ್ಷಿಕ 3 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಅಂದಾಜಿದೆ. ಈ ಘಟಕ ಸ್ಥಾಪನೆಗಾಗಿ ಚೀನಾ ಈಗಾಗಲೆ 30 ಸಾವಿರ ಟನ್ ಡಕ್ಟೈಲ್ ಐರನ್ ಪೈಪ್ಗಳನ್ನು ಭಾರತಕ್ಕೆ ರವಾನಿಸಿದೆ.
ಚೈನಾ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಗ್ರೂಪ್ ಕಾರ್ಪೋರೇಷನ್ (ಸಿಇಟಿಸಿ): ಸಿಇಟಿಸಿ ಕಂಪನಿಯು ಆಂಧ್ರಪ್ರದೇಶದ ಶ್ರೀ ನಗರದಲ್ಲಿ 200 ಮೆಗಾ ವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲು 320 ಕೋಟಿ ರೂ. ಹೂಡಿಕೆ ಮಾಡಿದೆ. ಸಿಇಟಿಸಿಯು ಚೀನಾದ ಮಿಲಿಟರಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸಂಸ್ಥೆಯಾಗಿದ್ದು, ಹಿಕ್ವಿಷನ್ ಎಂಬ ಸಿಸಿ ಕ್ಯಾಮರಾಗಳನ್ನೂ ಉತ್ಪಾದಿಸುತ್ತದೆ. ಸಿಇಟಿಸಿಯ ಸಂಶೋಧನಾ ಸಂಸ್ಥೆಗಳು ಮತ್ತು ಉಪಸಂಸ್ಥೆಗಳನ್ನು ಅಮೆರಿಕ ಸರ್ಕಾರ ರಾಷ್ಟ್ರೀಯ ಭದ್ರತಾ ಹಿತದೃಷ್ಟಿಯಿಂದ ರಫ್ತು ನಿರ್ಬಂಧಿತ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಈ ಸಂಸ್ಥೆಯು 3 ಅಕ್ರಮ ರಫ್ತು ಪ್ರಕರಣಗಳಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯಿಂದ ಶಿಕ್ಷೆಗೆ ಗುರಿಯಾಗಿದೆ. ಮಿಲಿಟರಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಸಿಇಟಿಸಿಯ ಹಲವು ಸಿಬ್ಬಂದಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಹುವಾಯ್: ಪೀಪಲ್ಸ್ ಲಿಬರೇಷನ್ ಆರ್ಮಿಯ ಇಂಜಿನಿಯರಿಂಗ್ ಕೋರ್ನ ಮಾಜಿ ಉಪನಿರ್ದೇಶಕ ರೆನ್ ಝೆಂಗ್ಫೈ ನೇತೃತ್ವದ ಹುವಾಯ್ ಕಂಪನಿ 1987ರಲ್ಲಿ ಶೆನ್ಜೆನ್ನಲ್ಲಿ ಸ್ಥಾಪಿಸಲ್ಪಟ್ಟಿದೆ. ಭಾರತದ ಸ್ಮಾರ್ಟ್ಫೋನ್ ಮತ್ತು ಮೊಬೈಲ್ ಸಂಪರ್ಕ ಕ್ಷೇತ್ರದಲ್ಲಿ ಈ ಬ್ರ್ಯಾಂಡ್ನೇಮ್ ಭಾರಿ ಜನಪ್ರಿಯತೆ ಗಳಿಸಿದ್ದು 2018-19ನೇ ಸಾಲಿನಲ್ಲಿ ಒಟ್ಟು 12,800 ಕೋಟಿ ರೂ. ಆದಾಯ ಗಳಿಸಿಕೊಂಡಿದೆ.