ನ್ಯೂಸ್

ಭಯದ ನೆರಳಿನಲ್ಲಿ ವುಹಾನ್​; 77 ದಿನಗಳ ಲಾಕ್​ಡೌನ್ ಮುಕ್ತಾಯ

ಕರೊನಾ ಮೊದಲ ಬಾರಿಗೆ ಕಂಡುಬಂದಿದ್ದ ವುಹಾನ್​ನಲ್ಲಿ 77 ದಿನಗಳ ಲಾಕ್​ಡೌನ್ ಮುಕ್ತಾಯವಾಗಿದೆ. ಭಾರತದಲ್ಲಿ ಹೇರಿರುವ ಲಾಕ್​ಡೌನ್ ಮುಗಿಯಲು ಇನ್ನೂ ಎರಡು ವಾರವಿದೆ. ವುಹಾನ್ ಅದನ್ನು ಹೇಗೆ ಎದುರಿಸಿತು? ಲಾಕ್​ಡೌನ್ ತೆರವಿನ ನಂತರದ ಸ್ಥಿತಿಯೇನು? ಎಂಬ ಬಗ್ಗೆ ಸಂಕ್ಷಿಪ್ತ ವರದಿ ಇಲ್ಲಿದೆ.

ಚೀನಾದಲ್ಲಿ ಹೇಗಿತ್ತು ಲಾಕ್​ಡೌನ್? ಕರೊನಾ ವೈರಸ್​ನ ಮೊದಲ ಪ್ರಕರಣ ವರದಿಯಾದ ಹಲವು ವಾರಗಳ ನಂತರ, ಜನವರಿ 23ರಂದು ವುಹಾನ್​ನಲ್ಲಿ ಲಾಕ್​ಡೌನ್ ಹೇರಲಾಯಿತು. ಲಾಕ್​ಡೌನ್ ತುಂಬಾ ಕಠಿಣ ಕ್ರಮ ಎಂದು ಮೊದಲು ಅನೇಕರು ಭಾವಿಸಿದರು. ಆದರೆ ಕರೊನಾ ವೈರಸ್ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಅದು ಯಶಸ್ವಿಯಾಯಿತು. ನಗರದಿಂದ ಹೊರಹೋಗುವ ಹಾಗೂ ನಗರದೊಳಗೆ ಬರುವ ವಾಹನ ಸಂಚಾರ ನಿಷೇಧಿಸಲಾಯಿತು. ಶಾಲಾ-ಕಾಲೇಜ್​ಗಳಿಗೆ ನೀಡಿದ್ದ ರಜೆಯನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಯಿತು. ಆಹಾರ ಮತ್ತು ಔಷಧ ಅಂಗಡಿ ಹೊರತು ಪಡಿಸಿ ಇತರ ಎಲ್ಲ ಅಂಗಡಿಗಳನ್ನು ಮುಚ್ಚಲಾಯಿತು. ಖಾಸಗಿ ವಾಹನಗಳು ರಸ್ತೆಗಿಳಿಯಲು ಬಿಡಲಿಲ್ಲ. ಕೆಲವು ಪ್ರದೇಶಗಳಲ್ಲಿ ಅಗತ್ಯ ಸಾಮಗ್ರಿ ಖರೀದಿಸಲು ಕುಟುಂಬದ ಒಬ್ಬ ಸದಸ್ಯ ಮಾತ್ರವೇ ಮನೆಯಿಂದ ಹೊರಹೋಗಲು ಅವಕಾಶ ನೀಡಲಾಯಿತು. ಉಳಿದೆಡೆ ಯಾರಿಗೂ ಮನೆಯಿಂದ ಹೊರಗೆ ಬರಲೇ ಅವಕಾಶ ನೀಡಲಿಲ್ಲ.

ಶೇ. 83 ಸಾವು ವುಹಾನ್​ನಲ್ಲಿ: ಚೀನಾದಲ್ಲಿ ಕೋವಿಡ್- 19ನಿಂದ ಸತ್ತ ಒಟ್ಟು ಜನರಲ್ಲಿ ವುಹಾನ್ ಪಾಲು ಶೇಕಡಾ 83 ಆಗಿದೆ. ಸಾವಿನ ಸಂಖ್ಯೆ ಬಗ್ಗೆ ಹಲವು ದೇಶಗಳು ಅನುಮಾನ ವ್ಯಕ್ತಪಡಿಸಿದ ನಂತರ ಕಳೆದ ವಾರ ಸಾವಿನ ಸಂಖ್ಯೆ ಪರಿಷ್ಕರಿಸಲಾಗಿದೆ.

ಗೋಡೆ, ಬೇಲಿ ಇನ್ನೂ ಇದೆ: ಕರೊನಾ ಪ್ರಕರಣ ವರದಿಯಾದಲ್ಲಿ ಜನರು ಮನೆಗಳಿಂದ ಹೊರ ಬಾರದಂತೆ ಈಗಲೂ ನಿವಾಸಿಗಳ ಸಂಘಗಳು ನಿರ್ಬಂಧ ವಿಧಿಸಬಹುದಾಗಿದೆ. ಕ್ವಾರಂಟೈನ್ ನಿಯಮ ಉಲ್ಲಂಘನೆ ತಡೆಯುವ ಉದ್ದೇಶದಿಂದ ನಿರ್ವಿುಸಲಾಗಿದ್ದ ಗೋಡೆಗಳು ಹಾಗೂ ಮುಳ್ಳು ತಂತಿ ಬೇಲಿಗಳನ್ನು ಇನ್ನೂ ಹಾಗೇ ಮುಂದುವರಿಸಲಾಗಿದೆ.

ಸಹಜ ಸ್ಥಿತಿಯತ್ತ ನಗರ: 77 ದಿನಗಳ ಕಠಿಣ ನಿರ್ಬಂಧಗಳ ನಂತರ ಆಟೋ ಬಿಡಿಭಾಗ ತಯಾರಿಕೆ ಕೇಂದ್ರ ವುಹಾನ್ ಜನಜೀವನ ಏಪ್ರಿಲ್ 8ರಿಂದ ಪುನಾರಂಭವಾಯಿತು. ಸಾರ್ವಜನಿಕ ಸಾರಿಗೆ, ಮಾಲ್​ಗಳು, ಫ್ಯಾಕ್ಟರಿಗಳು ನಿಧಾನವಾಗಿ ಎಂದಿನ ಚಟುವಟಿಕೆಗಳಿಗೆ ಮರಳುತ್ತಿವೆ. ವೈರಸ್ ಇನ್ನೊಂದು ಸುತ್ತಿನಲ್ಲಿ ಕಾಟ ಕೊಡಬಹುದೆಂಬ ಆತಂಕದ ನಡುವೆಯೇ ಇವೆಲ್ಲ ನಡೆಯುತ್ತಿವೆ.

ಆತಂಕ: ವುಹಾನ್​ನಲ್ಲಿ ವ್ಯಾಪಾರ ವ್ಯವಹಾರಗಳ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದ್ದು ಇದು ಮತ್ತೆ ವೈರಸ್ ಹರಡಲು ಕಾರಣವಾಗಬಹುದು ಎಂಬುದು ತಜ್ಞರ ಆತಂಕವಾಗಿದೆ. ಜನರು ಫ್ಯಾಕ್ಟರಿ, ಕಚೇರಿಗಳಿಗೆ ಹೋಗುವುದು ಮತ್ತು ವಿದೇಶಗಳಿಂದ ಜನರು ಬರುವುದು ಎರಡನೇ ಸುತ್ತಿನಲ್ಲಿ ವೈರಸ್ ಉಲ್ಬಣಿಸಲು ಅಥವಾ ಹೊಸ ಪ್ರಕರಣ ಕಾಣಿಸಿಕೊಳ್ಳಲು ಕಾರಣವಾದೀತು ಎನ್ನುವುದು ಕಳವಳಕ್ಕೆ ಕಾರಣವಾಗಿದೆ.

ಸಂಚಾರಕ್ಕೆ ಪಾಸ್ ವ್ಯವಸ್ಥೆ: ಭವಿಷ್ಯದಲ್ಲಿ ಕರೊನಾ ಮತ್ತೆ ಕಾಡದಿರಲೆಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಾಸ್ ಹೊಂದಿರುವವರು ಮಾತ್ರವೇ ಮುಕ್ತವಾಗಿ ಸಂಚಾರ ಮಾಡಬಹುದು. ಚೀನಾದ ಮಾಹಿತಿ ತಂತ್ರಜ್ಞಾನ ದಿಗ್ಗಜರಾದ ಆಲಿಬಾಬಾ ಮತ್ತು ಟೆನ್​ಸೆಂಟ್ ಈ ಬಗ್ಗೆ ಆಪ್ ಅಭಿವೃದ್ಧಿ ಪಡಿಸಿವೆ. ಜನರ ವಾಸಸ್ಥಳ, ಆರೋಗ್ಯ ಮಾಹಿತಿ, ಪ್ರಯಾಣ ವಿವರ ಮತ್ತು ನಿಕಟ ಸಂಪರ್ಕ ಮುಂತಾದ ಮಾಹಿತಿಗಳನ್ನು ಅವಲಂಬಿಸಿ ಹಸಿರು, ಹಳದಿ ಅಥವಾ ಕೆಂಪು ಬಣ್ಣದ ಕಾರ್ಡ್​ಗಳನ್ನು ನೀಡಲಾಗುತ್ತದೆ. ಹಸಿರು ಕೋಡ್​ಯುುಕ್ತ ಕಾರ್ಡ್ ಇದ್ದವರು ಮಾತ್ರ ತಮ್ಮ ಅಪಾರ್ಟ್​ವೆುಂಟ್​ಗಳಿಂದ ಹೊರಹೋಗಬಹುದು. ಆದರೆ, ಅಂಥವರು ಭೇಟಿ ನೀಡಿದ ಸ್ಥಳದಲ್ಲಿ ಕರೊನಾವಿರುವುದು ನಂತರ ಖಾತರಿಯಾದರೆ ಅಂಥವರ ಕಾರ್ಡ್ ಹಸಿರಿನಿಂದ ಹಳದಿಯಾಗಿ ಪರಿವರ್ತನೆಯಾತ್ತದೆ.

ಕೆಲಸಕ್ಕೆ ಮುನ್ನ ತಪಾಸಣೆ: ವುಹಾನ್​ನಲ್ಲಿ ಪುನಾರಂಭವಾಗುವ ಕಂಪನಿಗಳು ತಮ್ಮ ಉದ್ಯೋಗಿಗಳು ಕೆಲಸಕ್ಕೆ ಬರುವ ಮುನ್ನ ಆರೋಗ್ಯ ತಪಾಸಣೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಿವೆ. ನೌಕರರ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳನ್ನು ಪಡೆಯುತ್ತಿವೆ. ಪ್ರತಿದಿನ ಫ್ಯಾಕ್ಟರಿಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದು ಹಾಗೂ ನೌಕರರಿಗೆ ರಕ್ಷಣಾ ಸಲಕರಣೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನೌಕರರಲ್ಲಿ ಸೋಂಕು ಕಂಡು ಬಂದಲ್ಲಿ ತಕ್ಷಣವೇ ಕಾರ್ಖಾನೆಯ ಕೆಲಸ ಸ್ಥಗಿತಗೊಳಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಳು...

ಲಾಕ್​ಡೌನ್​ನಿಂದ ಉದ್ಭವಿಸುವ ಒತ್ತಡ ನಿವಾರಿಸುವುದು, ತಪಾಸಣೆ ಹಾಗೂ ಜನಜಾಗೃತಿಯ ಚೆಕ್​ಲಿಸ್ಟ್​ನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಲಾಕ್​ಡೌನ್ ವಾಪಸ್ ಪಡೆಯಬೇಕಾದರೆ ಯಾವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದೂ ತಿಳಿಸಿದೆ.

1 ವೈರಸ್ ವ್ಯಾಪಿಸುವುದನ್ನು ನಿಯಂತ್ರಿಸಿರಬೇಕು.

2 ಪ್ರತಿ ಪ್ರಕರಣದ ತಪಾಸಣೆ, ಐಸೋಲೇಷನ್​ಗೆ ಮತ್ತು ಪ್ರತಿಯೊಂದು ಸಂಪರ್ಕ ವ್ಯಕ್ತಿಯನ್ನು ಕಂಡುಹಿಡಿಯಲು ಆರೋಗ್ಯ ವ್ಯವಸ್ಥೆ ಸನ್ನದ್ಧವಾಗಿರಬೇಕು.

3 ಆರೋಗ್ಯ ಕೇಂದ್ರಗಳು ಮತ್ತು ನರ್ಸಿಂಗ್ ಹೋಂ ಮೊದಲಾದೆಡೆ ವ್ಯಾಧಿ ಹೆಚ್ಚುವ ಸಂಭಾವ್ಯತೆಯನ್ನು ಕಡಿಮೆ ಮಾಡಬೇಕು.

4 ಪುನಾರಂಭ ಮಾಡುವ ಕೆಲಸದ ಸ್ಥಳಗಳು, ಶಾಲೆಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು.

5 ಹೊಸ ನಿಯಮಗಳ ಬಗ್ಗೆ ಜನಜಾಗೃತಿ ಮೂಡಿಸಬೇಕು.