ನ್ಯೂಸ್

ಕರೊನಾ ವಿರುದ್ಧ ಹೋರಾಡಿ ರೋಗಿಗಳ ಜೀವ ಉಳಿಸಿದ ವೈದ್ಯರಿಗೆ ಇದೆಂಥಾ ಸ್ಥಿತಿ ಬಂತು ನೋಡಿ

ವುಹಾನ್​: ಕರೊನಾ ಬಗ್ಗೆ ಜಗತ್ತಿಗೆ ಎಚ್ಚರಿಕೆ ಸಂದೇಶ ನೀಡಿದ ಚೀನಾ ವೈದ್ಯ ಶಿಕ್ಷೆಗೆ ಗುರಿಯಾಗಿ ಕರೊನಾ ಸೋಂಕಿಗೆ ಬಲಿಯಾದ. ಈಗ ಆತನ ಇಬ್ಬರು ಸಹೋದ್ಯೋಗಿಗಳು ಕೂಡ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.

ವುಹಾನ್​ ಈ ಇಬ್ಬರೂ ವೈದ್ಯರು ಕಳೆದ ನೂರು ದಿನಗಳಿಂದ ಸಂಪೂರ್ಣವಾಗಿ ಜೀವರಕ್ಷಕ ಸಾಧನಗಳಿಂದಾಗಿ ಬದುಕುಳಿದ್ದಾರೆ. ಇವರ ಯಕೃತ್ತಿಗೆ ಹಾನಿಯಾಗಿರುವುದರಿಂದ ದೇಹದ ಚರ್ಮವೆಲ್ಲ ಕಪ್ಪು ಬಣ್ಣಕ್ಕೆ ತಿರುಗಿದೆ. ಮಾನಸಿಕವಾಗಿ ಭಾರಿ ಕುಗ್ಗಿ ಹೋಗಿರುವುದರಿಂದ ಅವರಿಗೆ ಕೌನ್ಸೆಲ್ಲಿಂಗ್​ ನೀಡಲಾಗುತ್ತಿದೆ ಎಂದು ವುಹಾನ್ ಸೆಂಟ್ರಲ್​ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಡಾ.ಯಿ ಫ್ಯಾನ್​ ಹಾಗೂ ಡಾ. ಹು ವೆಫೆಂಗ್​ ಇಬ್ಬರೂ 42 ವರ್ಷದವರು. ಕರೊನಾ ಭೀಕರತೆ ಬಗ್ಗೆ ಜಗತ್ತಿಗೆ ತಿಳಿಸಿದ ಹಾಗೂ ಅದಕ್ಕಾಗಿ ಚೀನಾ ಸರ್ಕಾರದಿಂದ ಶಿಕ್ಷೆಗೆ ಗುರಿಯಾದ ಲೀ ವೆನ್​ಲಿಯಾಂಗ್​ ಜತೆ ಇವರಿಬ್ಬರೂ ಕೆಲಸ ಮಾಡಿದ್ದಾರೆ. ಲೀ ವೆನ್​ಲಿಯಾಂಗ್​ ಫೆ.7ರಂದು ಕರೊನಾಗೆ ಬಲಿಯಾಗಿದ್ದಾರೆ.

ಈ ಇಬ್ಬರೂ ವೈದ್ಯರಿಗೆ ಜನವರಿ 18ರಂದು ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆರಂಭದಲ್ಲಿ ಇವರನ್ನು ವುಹಾನ್​ ಶ್ವಾಸಕೋಶ ರೋಗಗಳ ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವುಹಾನ್​ ಸೆಂಟ್ರಲ್​ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್​ನಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾದ ಇವರನ್ನು ಜೀವರಕ್ಷಕ ಸಾಧನಗಳನ್ನು ಬಳಸಿ ಉಳಿಸಿಕೊಳ್ಳಲಾಗಿದೆ. ಯಕೃತ್ತಿಗೆ ಹಾನಿಯಾಗಿದ್ದರಿಂದ ಹಾರ್ಮೋನ್​ ಸ್ರವಿಸುವಿಕೆಯಲ್ಲಿ ಉಂಟಾದ ಅಸಮತೋಲನದಿಂದಾಗಿ ಇಬ್ಬರ ಮೈ ಬಣ್ಣ ಕಪ್ಪಾಗಿದೆ. ಇದು ಅವರಲ್ಲಿ ಭಾರಿ ಮಾನಸಿಕ ಕ್ಷೋಭೆ ಉಂಟು ಮಾಡಿದೆ.

ಡಾ. ಯಿ ಹೃದಯ ರೋಗ ತಜ್ಞರಾಗಿದ್ದರೆ, ಡಾ. ಹು ಮೂತ್ರರೋಗ ತಜ್ಞರು. ತಮಗೆ ನೀಡಲಾಗುತ್ತಿದ್ದ ಚಿಕಿತ್ಸೆಯ ಅರಿವೇ ಇವರಿಗಿರಲಿಲ್ಲ. ಅರಿವು ಬಂದಾಗ ತಾವಿದ್ದ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಆದರೆ, ಇವರಿಬ್ಬರನ್ನೂ ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ ವೈದ್ಯರು. ಇವರ ಯಕೃತ್ತು ಮೊದಲಿನಂತೆ ಕಾರ್ಯನಿರ್ವಹಿಸಲು ಆರಂಭಿಸಿದರೆ ಮೈಬಣ್ಣ ಬದಲಾಗಬಹುದು ಎನ್ನುವ ವಿಶ್ವಾಸ ವೈದ್ಯರದ್ದಾಗಿದೆ.