ನ್ಯೂಸ್

ರಾಂಗ್ ಸೈಡ್ ಡ್ರೈವಿಂಗ್; 12 ಸಾವಿರ ಕೇಸ್

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ವಾಹನ ಚಾಲನೆ ವಿರುದ್ಧ 12 ಸಾವಿರ ಕೇಸ್ ದಾಖಲಿಸಿ ದಂಡ ವಸೂಲಿ ಮಾಡಲಾಗಿದ್ದು, ಇದರಲ್ಲಿ ಬೆಂಗಳೂರು ನಗರದಲ್ಲಿ 9,397 ಕೇಸ್ ದಾಖಲಾಗಿದೆ.

ರಾಜ್ಯದಲ್ಲಿ ರಸ್ತೆ ಅಪಘಾತ ಮತ್ತು ಸಾವು ನೋವು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ತರಲು ಪೊಲೀಸ್ ಇಲಾಖೆ ಮುಂದಾಗಿದೆ. ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವರ ವಿರುದ್ಧ ಆಗಸ್ಟ್ 1ರಿಂದ ಕೇಸ್ ಮತ್ತು ಎ್ಐಆರ್ ದಾಖಲಿಸುವಂತೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್‌ಕುಮಾರ್ ಆದೇಶಿಸಿದ್ದರು.

ಈ ನಿಟ್ಟಿನಲ್ಲಿ ಆಗಸ್ಟ್ 1ರಿಂದ ರಾಜ್ಯದ ಎಲ್ಲೆಡೆ ಸಂಚಾರ ಮತ್ತು ಸಿವಿಲ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, 12,096 ಕೇಸ್ (ಆ.15 ವರೆಗೆ) ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ. ಇದರಲ್ಲಿ 51 ಎಫ್ ಐಆರ್ ದಾಖಲಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಜೀವಕ್ಕೆ ಅಪಾಯವಾಗಿದೆ. ಆದರಿಂದ ಹೆದ್ದಾರಿಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವ ವಾಹನ ಚಾಲಕ/ಸವಾರರ ವಿರುದ್ಧ ಬಿಎನ್‌ಎಸ್ 281 ರ ಅನ್ವಯ ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆ 184 ಅನ್ವಯ ಎಫ್ ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಅಲೋಕ್ ಕುಮಾರ್ ಪೊಲೀಸರಿಗೆ ಸೂಚಿಸಿದ್ದರು.

ದಂಡ ವಿಧಿಸುವುದರಿಂದ ಸಂಚಾರ ನಿಯಮ ಉಲ್ಲಂಘನೆಯನ್ನು ತಡೆಯಲು ಸಾಧ್ಯವಿಲ್ಲ. ವಾಹನ ಚಾಲನ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಸಾಧ್ಯವೆಂದು ಅಲೋಕ್‌ಕುಮಾರ್, ಸಾರ್ವಜನಿಕರಿಗೆ ಕಿವಿ ಮಾತು ನೀಡಿದ್ದಾರೆ.