ಮೊಬೈಲ್ ಅಂಗಡಿಗೆ ಮಾಲೀಕನನ್ನು ಆಲಂಗಿಸಿದ ವಾನರ 
ನ್ಯೂಸ್

ಅಬ್ಬಾ.. ಎಂತಹ ಮನಮಿಡಿಯುವ ದೃಶ್ಯ: ಮೊಬೈಲ್ ಶಾಪ್‌ಗೆ ಬಂದು ವ್ಯಾಪಾರಿಯನ್ನು ಅಪ್ಪಿದ ಕೋತಿ! | Monkey Hugging Man

ಒಡಿಶಾದ ಮೊಬೈಲ್ ಅಂಗಡಿಯೊಂದರಲ್ಲಿ ಅಪರೂಪದ ಘಟನೆ ನಡೆದಿದ್ದು, ಕೆಲಸ ಮಾಡುತ್ತಿದ್ದ ಮಾಲೀಕನನ್ನು ಲಂಗೂರ್ ಕೋತಿಯೊಂದು ಶಾಂತವಾಗಿ ಅಪ್ಪಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Langur Hugging Man: ಒಡಿಶಾದಲ್ಲಿ ಅಪರೂಪದ ಹಾಗೂ ಭಾವುಕ ಘಟನೆಯೊಂದು ನಡೆದಿದೆ. ಮೊಬೈಲ್ ರಿಪೇರಿ ಅಂಗಡಿಯೊಂದಕ್ಕೆ ಬಂದ ಲಂಗೂರ್ (ಲಂಗೂರ್ ಕೋತಿ) ಒಂದಷ್ಟು ಹೊತ್ತು ಅಂಗಡಿಯ ಮಾಲೀಕನನ್ನು ಶಾಂತವಾಗಿ ಅಪ್ಪಿಕೊಂಡಿದೆ. ಈ ಅಪರೂಪದ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಒಡಿಶಾದ ಮೊಬೈಲ್ ರಿಪೇರಿ ಅಂಗಡಿಯೊಂದರಲ್ಲಿ ಮಾಲೀಕ ಮತ್ತು ಸಹಾಯಕ ಎಂದಿನಂತೆ ಕೆಲಸ ಮಾಡುತ್ತಿದ್ದರು. ಈ ವೇಳೆ ತೆರೆದಿದ್ದ ಬಾಗಿಲಿನಿಂದ ಹನುಮಾನ್ ಕೋತಿ (ಲಂಗೂರ್) ಒಳಗೆ ಬಂದಿದೆ. ಇದನ್ನು ಗಮನಿಸಿದ ಸಹಾಯಕ, ಮಾಲೀಕನ ಕುರ್ಚಿಯನ್ನು ಅಲ್ಲಾಡಿಸಿ ಎಚ್ಚರಿಸಿದ್ದಾನೆ. ಆದರೆ, ಅವರು ಪ್ರತಿಕ್ರಿಯಿಸುವಷ್ಟರಲ್ಲೇ ಲಂಗೂರ್ ನೇರವಾಗಿ ಕೌಂಟರ್ ಬಳಿ ತೆರಳಿದೆ.

ವ್ಯಾಪಾರಿಯನ್ನು ಅಪ್ಪಿಕೊಂಡ ಕೋತಿ

ಯಾವುದೇ ಕೋಪ ಅಥವಾ ಗಲಾಟೆ ಮಾಡದ ಈ ಪ್ರಾಣಿ, ಮೇಜಿನ ಮೇಲೆ ಏರಿ ಮಾಲೀಕನ ಎದೆಗೆ ತಲೆಯಿಟ್ಟು ಶಾಂತವಾಗಿ ಅಪ್ಪಿಕೊಂಡಿದೆ. ಅಂಗಡಿಯಲ್ಲಿದ್ದ ಮೊಬೈಲ್ ಬಿಡಿಭಾಗಗಳಿಗಾಗಲಿ ಅಥವಾ ವಸ್ತುವಿಗಾಗಲಿ ಯಾವುದೇ ಹಾನಿ ಮಾಡದೆ, ಕೆಲ ಸಮಯ ಸೌಮ್ಯವಾಗಿ ಅಪ್ಪಿಕೊಂಡು ಸುಮ್ಮನೆ ಕುಳಿತಿದೆ. ಮಾಲೀಕರು ಕೂಡ ಹೆದರದೆ ಶಾಂತವಾಗಿ ಲಂಗೂರ್‌ನನ್ನು ಅಪ್ಪಿಕೊಳ್ಳಲು ಬಿಟ್ಟಿದ್ದಾರೆ.

ವೈರಲ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕಾಣಸಿಗುವ ಕೋತಿಗಳು ತಂಟೆ ಮಾಡುವುದು ಅಥವಾ ಆಹಾರ ಕದಿಯುವುದು ಹೆಚ್ಚು. ಆದರೆ ಈ ಲಂಗೂರ್ ತೋರಿಸಿದ ಶಾಂತ ನಡೆ ಮತ್ತು ಪ್ರೀತಿ ನೆಟ್ಟಿಗರ ಮನ ಗೆದ್ದಿದೆ.

ಇದನ್ನೂ ಓದಿ: ಭಾನುವಾರವೇ ಇರಾನ್ ಮೇಲೆ ದಾಳಿ ನಡೆಸಬಹುದು!...ಟ್ರಂಪ್ ಹೇಳಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಹೆಚ್ಚಾಯ್ತು ಆತಂಕ | US Iran Conflict

ಎಕ್ಸ್ (ಟ್ವಿಟರ್) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದು, ಹಲವರು ‘ಇದು ದೈವಿಕ ಅನುಬಂಧ’ ಎಂದು ಬಣ್ಣಿಸಿದ್ದಾರೆ. ಹಿಂದೂ ಧರ್ಮದಲ್ಲಿ ಲಂಗೂರ್‌ಗಳನ್ನು ಹನುಮಂತನ ರೂಪವೆಂದು ಭಾವಿಸುವುದರಿಂದ, ನೆಟ್ಟಿಗರು ಇದನ್ನು ದೇವರ ಆಶೀರ್ವಾದವೆಂದು ಕೊಂಡಾಡಿದ್ದಾರೆ.