ಕಾನೂನು ಸುವ್ಯವಸ್ಥೆ ತಮ್ಮ ವ್ಯಾಪ್ತಿಗೆ ಬರಲ್ಲ ಎಂದ ಸಿಜೆಐ ಸೂರ್ಯಕಾಂತ್
ಸಿಜೆಐ ಸೂರ್ಯಕಾಂತ್ ಹೇಳಿಕೆಗೆ ಅಭಿಜೀತ್ ದೀಪ್ಕೆ ಪ್ರತಿಕ್ರಿಯೆ
ಪ್ರಧಾನಿ ಮೋದಿಗೂ ಇದೇ ಮಾತು ಹೇಳುತ್ತೀರಾ? ಎಂದು ಸುಪ್ರೀಂಗೆ ಪ್ರಶ್ನೆ
Abhijeet Dipke: ದೆಹಲಿಯ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸುವಾಗ ಕಾನೂನು ಸುವ್ಯವಸ್ಥೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ, “ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದೇ ಮಾತು ಹೇಳುತ್ತೀರಾ?” ಎಂದು ಸುಪ್ರೀಂ ಕೋರ್ಟ್‌ಗೆ ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿದ ವಿಚಾರ ಪ್ರಸ್ತಾಪಿಸಿದ ದೀಪ್ಕೆ, ಮತದಾನ ಮಾಡಲು ಸಾಧ್ಯವಾಗದವರು ಮುಂದಿನ ಬಾರಿ ಮತ ಹಾಕಬಹುದು ಎಂದು ಹೇಳಲಾಗಿದೆ ಎಂದು ಟೀಕಿಸಿದ್ದಾರೆ. “ಪ್ರಧಾನಿ ಮೋದಿ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ, ಮುಂದಿನ ಬಾರಿ ಸ್ಪರ್ಧಿಸಿ ಎಂದು ಹೇಳುತ್ತೀರಾ? ಹಾಗೆ ಹೇಳಲು ಸಾಧ್ಯವಿಲ್ಲದಿದ್ದರೆ ಮತದಾರರಿಗೆ ಈ ಸಲಹೆ ನೀಡಲು ಯಾವ ಆಧಾರವಿದೆ?” ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿವಾದಕ್ಕೆ ಕಾರಣವಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ನಿರ್ಧಾರಗಳು ಮತ್ತು ಆದೇಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ತೆಗೆದುಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದರೆಂದು ವರದಿಯಾಗಿದೆ.
ಆದರೆ, ಎಸ್‌ಐಆರ್ ಸೇರಿದಂತೆ ಎಲ್ಲ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇತ್ತ, ಎಸ್‌ಐಆರ್ ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಅವರ ರಾಜೀನಾಮೆಗೆ ಆಗ್ರಹಿಸಿವೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಅಭಿಜೀತ್ ದೀಪ್ಕೆ ಹೇಳಿದ್ದಾರೆ.
ದೆಹಲಿಯ ಪ್ರತಿಭಟನೆಗಳು ಮತ್ತು ನಿರ್ಬಂಧಗಳ ಕುರಿತು ಕೇಳಿದ ಪ್ರಶ್ನೆಗೆ ಸಿಜೆಐ ಸೂರ್ಯಕಾಂತ್, “ಇದು ಕಾನೂನು ಸುವ್ಯವಸ್ಥೆಯ ವಿಷಯ. ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ” ಎಂದು ಹೇಳಿದ್ದರು. ಆದರೆ, ಸಾಮಾನ್ಯ ನಾಗರಿಕರು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಸುಪ್ರೀಂ ಕೋರ್ಟ್‌ನ ಬಾಗಿಲು ತೆರೆದಿದೆ ಎಂದೂ ತಿಳಿಸಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ನ ಕೇರಳ ಘಟಕ, “ಕಾನೂನು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ ರಾಜೀನಾಮೆ ನೀಡಿ. ಈ ಜವಾಬ್ದಾರಿ ನಿಭಾಯಿಸಬಲ್ಲ ಬೇರೊಬ್ಬರನ್ನು ನಾವು ಹುಡುಕುತ್ತೇವೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು. ಬಳಿಕ ಆ ಪೋಸ್ಟ್ ಅನ್ನು ಅಳಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಲು ಅಭಿಜೀತ್ ದೀಪ್ಕೆ ನಿರಾಕರಿಸಿದ್ದಾರೆ. (ಏಜೆನ್ಸೀಸ್)