ಮದ್ದೂರು: ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ಹಾಗೂ ಶ್ರೀ ನಂದಿ ನಾಗಲಿಂಗೇಶ್ವರ ದೇವಾಲಯದ ದೇವರ ಬಸವಪ್ಪ ಅನಾರೋಗ್ಯದಿಂದ ಲಿಂಗೈಕ್ಯವಾದ ಹಿನ್ನೆಲೆಯಲ್ಲಿ ಮಹದೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್‌ನಿಂದ ಶ್ರೀ ಬಸವಪ್ಪನಿಗೆ ಶಿವಗಣಾರಾಧನೆ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಬಸವಪ್ಪನಿಗೆ ಶಿವಗಣಾರಾಧನೆ ಅಂಗವಾಗಿ ಶ್ರೀ ನಂದಿ ನಾಗಲಿಂಗೇಶ್ವರ ದೇವಾಲಯ ಆವರಣದಲ್ಲಿ ಸೋಮವಾರ ಹೋಮ, ಹವನ, ಅಲಂಕಾರ, ಅಭಿಷೇಕ ಇನ್ನಿತರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳವಾರ ಬೆಳಗ್ಗೆ 7ಕ್ಕೆ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಮಹದೇಶ್ವರ ವಿಗ್ರಹ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಲಿಂಗೈಕ್ಯವಾದ ಬಸವಪ್ಪನಿಗೆ 10.30ರಿಂದ 12 ಗಂಟೆಯೊಳಗೆ ಹಾಲುತುಪ್ಪ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಟ್ರಸ್ಟ್ ಅಧ್ಯಕ್ಷ ಸತೀಶ್ ಮಾತನಾಡಿ, ಪಟ್ಟಣದ ಬಸವೇಶ್ವರ ನಗರ ಹಾಗೂ ಚನ್ನೇಗೌಡ ಬಡಾವಣೆಯ ಶ್ರೀ ಮಹದೇಶ್ವರಸ್ವಾಮಿ ಹಾಗೂ ಶ್ರೀ ನಂದಿ ನಾಗಲಿಂಗೇಶ್ವರ ದೇವಾಲಯದ ದೇವರ ಬಸವಪ್ಪ ಭಕ್ತಾದಿಗಳ ಪಾಲಿಗೆ ಆರಾಧ್ಯ ದೈವವಾಗಿತ್ತು. ಭಕ್ತಾದಿಗಳು ದೇವರ ಬಸವಪ್ಪನನ್ನು ಅತ್ಯಂತ ಪ್ರೀತಿಯಾಗಿ ಕಾಣುತ್ತಿದ್ದರು. ಬಸವ ಅನಾರೋಗ್ಯದ ಹಿನ್ನೆಲೆಯಲ್ಲಿ ಲಿಂಗೈಕ್ಯವಾಗಿರುವುದು ಅತ್ಯಂತ ಬೇಸರದ ಸಂಗತಿ ಎಂದರು.
ಟ್ರಸ್ಟ್ ಕಾರ್ಯದರ್ಶಿ ರಮೇಶ್ ಮಾತನಾಡಿ, ಪಟ್ಟಣದ ಬಿಡಗಂಡಿನಾಲೆ ಬಳಿ ಶ್ರೀ ಬಸವಪ್ಪನ ಗದ್ದುಗೆ ನಿರ್ಮಾಣ ಮಾಡಿದ್ದು, ಈ ಸ್ಥಳವನ್ನು ಶ್ರೀ ನಂದಿ ಬಸವೇಶ್ವರ ಸರ್ಕಲ್ ಎಂದು ನಾಮಕರಣ ಮಾಡುವಂತೆ ಪುರಸಭೆಗೆ ಮನವಿ ಮಾಡಲಾಗಿದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ರಮೇಶ್, ಖಜಾಂಚಿ ಸವಿತಾ, ಮುಖಂಡರಾದ ಮಾದು, ಶಿವಕುಮಾರ್, ಜಯರಾಮು, ಕರಿಯಪ್ಪ, ಹರ್ಷ, ವೆಂಕಟೇಶ್, ಪಾಪಾ, ಕೃಷ್ಣ, ಪವಿತ್ರಾ ಶ್ರೀಕಾಂತ್, ರವೀಶ್ ಸೇರಿದಂತೆ ಇತರರು ಇದ್ದರು.