ನ್ಯೂಸ್

VIDEO| ಲಾಕ್​ಡೌನ್​ ನಡುವೆಯೇ ಗ್ರಾಮಕ್ಕೆ ಭೇಟಿ ಕೊಟ್ಟ ವಿಶ್ವದ ಅತಿಹೆಚ್ಚು ಕಳ್ಳಸಾಗಾಣೆಯಾಗುವ ಅಪರೂಪದ ಜೀವಿಯ ರಕ್ಷಣೆ

ರಾಂಚಿ: ಅಳಿವಿನಂಚಿನಲ್ಲಿರುವ ಹಾಗೂ ವಿಶ್ವದಲ್ಲೇ ಹೆಚ್ಚು ಕಳ್ಳಸಾಗಾಣೆಗೆ ಗುರಿಯಾಗುತ್ತಿರುವ ಪ್ಯಾಂಗೋಲಿನ್ ಸಸ್ತನಿಯನ್ನು ಲಾಕ್​ಡೌನ್​ ನಡುವೆಯೇ ಜಾರ್ಖಂಡ್​ನ ರಂಗಛಡ್​ ಗ್ರಾಮದಲ್ಲಿ ರಕ್ಷಿಸಲಾಗಿದೆ.

ಸಮೀಪದ ಮೈದಾನದಲ್ಲಿ ಅಡ್ಡಾಡುತ್ತಿದ್ದ ಪ್ಯಾಂಗೋಲಿನ್​ ಕಂಡ ಗ್ರಾಮಸ್ಥರು ಅದನ್ನು ಹಿಡಿದಿದ್ದರು. ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಪೊಲೀಸ್​ ಠಾಣೆಯ ಒಂದು ತಂಡ ಗ್ರಾಮಕ್ಕೆ ತೆರಳಿ ಸಸ್ತನಿಯನ್ನು ವಶಕ್ಕೆ ಪಡೆದಿದ್ದಾರೆ.

ಭಾರತೀಯ ಅರಣ್ಯಾಧಿಕಾರಿ ಸುಸಾಂತ್​ ನಂದಾ ಅವರು ತಮ್ಮ ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಪ್ಯಾಂಗೋಲಿನ್​ ತುಂಬಾ ಭಯಭೀತಗೊಂಡಿರುವಂತೆ ಕಾಣುತ್ತದೆ. ಅಲ್ಲದೆ, ಅದರ ಬಾಲವನ್ನು ಹಿಡಿದು ಆಡಿಸುವಾಗ ಅದನ್ನು ವಿಡಿಯೋ ಮಾಡುತ್ತಾ ಅದರ ಸುತ್ತ ಜನರು ನಿಂತಿರುವುದು ಟೀಕೆಗೆ ಗುರಿಯಾಗಿದೆ.

ಈ ಪ್ರಾಣಿ ತೀವ್ರವಾಗಿ ಒತ್ತಡಕ್ಕೆ ಸಿಲುಕಿದೆ. ಆದರೆ, ಅದನ್ನು ಸುರಕ್ಷಿತವಾಗಿ ತಲುಪಿಸುವ ಮುನ್ನ ಅದರ ವಿಡಿಯೋವನ್ನು ಮಾಡಲಾಗಿದೆ ಎಂದು ನಂದಾ ಅವರು ಟ್ವಿಟರ್​ನಲ್ಲಿ ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.

ಅಂದಹಾಗೆ ಪ್ಯಾಂಗೋಲಿನ್ ಏಫ್ರಿಕಾ ಮತ್ತು ಏಷ್ಯಾ ಭಾಗಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚು ಕಳ್ಳಸಾಗಾಣೆಯಾಗುವ ಜೀವಿ ಎಂದು ನಂಬಲಾಗಿದೆ. ಪ್ಯಾಂಗೋಲಿನ್​ ಮೇಲಿನ ಚಿಪ್ಪಿನ ಹೊದಿಕೆಗಾಗಿ ಅದನ್ನು ಕದ್ದು ಸಾಗಾಟ ಮಾಡುತ್ತಾರೆ. ಚಿಪ್ಪನ್ನು ಸಾಂಪ್ರದಾಯಿಕ ಔಷಧಕ್ಕಾಗಿಯೂ ಮತ್ತು ಮಾಂಸಕ್ಕಾಗಿಯೂ ಬಳಸುತ್ತಾರೆ. (ಏಜೆನ್ಸೀಸ್​)