ನ್ಯೂಸ್

ಕೊರೊನಾ ಭೀತಿಯಿಂದ 24ರಿಂದ ಬಾರ್ಸಿಲೋನದಲ್ಲಿ ನಡೆಯಬೇಕಿದ್ದ ವಿಶ್ವದ ಅತಿದೊಡ್ಡ ಮೊಬೈಲ್​ ಟ್ರೇಡ್​ ಫೇರ್​ ರದ್ದು

ಬಾರ್ಸಿಲೋನ: ವಿಶ್ವದ ಅತಿದೊಡ್ಡ ಮೊಬೈಲ್​ ಟ್ರೇಡ್​ ಫೇರ್​ ಕೊರೊನಾ ಭೀತಿಯಿಂದ ರದ್ದಾಗಿದೆ. ಕಾರ್ಯಕ್ರಮದ ಆಯೋಜಕರು ರದ್ದಾಗಿರುವುದನ್ನು ಖಚಿತ ಪಡಿಸಿದ್ದಾರೆ.

ಬಾರ್ಸಿಲೋನಾದಲ್ಲಿ ಫೆಬ್ರವರಿ 24ರಿಂದ 27ರವರೆಗೆ ವಿಶ್ವದ ದೊಡ್ಡ ಮೊಬೈಲ್​ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಗ್ಲೋಬಲ್​ ಸಿಸ್ಟಮ್​ ಫಾರ್​ ಮೊಬೈಲ್​ ಕಮ್ಯುನೀಕೇಶನ್​ (ಜಿಎಸ್​ಎಂಎ)​ ಈ ವಾರ್ಷಿಕ ಮೇಳವನ್ನು ಆಯೋಜಿಸಿತ್ತು.

ಈ ಸಂಬಂಧ ನಡೆಯಬೇಕಿದ್ದ ಸಭೆ ಕೂಡ ರದ್ದಾಗಿದೆ. ಸಭೆ ನಡೆಯುವ ಕೆಲವೇ ಗಂಟೆಗಳ ಮೊದಲು, ವೊಡಾಫೋನ್, ನೋಕಿಯಾ, ಡಾಯ್ಚ ಟೆಲಿಕಾಮ್, ಬ್ರಿಟನ್‌ನ ಬಿಟಿ ಮತ್ತು ಜಪಾನ್‌ನ ರಾಕುಟೆನ್, ಫೇಸ್‌ಬುಕ್, ಸಿಸ್ಕೊ ​​ಮತ್ತು ಚೀನಾದ ವಿವೊಗಳು ಕೂಡ ಸಮ್ಮೇಳನದಿಂದ ಹಿಂದೆ ಸರಿದಿವೆ.

ಇಲ್ಲಿಯವರೆಗೆ ಸ್ಪೇನ್​ನಲ್ಲಿ ಸೋಂಕಿನ ಮಾರಕ ವೈರಸ್​ ಕೊರೊನಾದ ಎರಡು ಪ್ರಕರಣಗಳು ಮಾತ್ರ ದೃಢಪಟ್ಟಿವೆ. ವಾರ್ಷಿಕ ಕಾಂಗ್ರೆಸ್ ಸಮ್ಮೇಳನದಲ್ಲಿ ಸಾಮಾನ್ಯವಾಗಿ ಚೀನಾದಿಂದ 5 ಸಾವಿರದಿಂದ 6 ಸಾವಿರ ಮಂದಿ ಭಾಗವಹಿಸುತ್ತಾರೆ. ಸಮ್ಮೇಳನ ಒಟ್ಟು 10 ಲಕ್ಷಕ್ಕೂ ಹೆಚ್ಚು ಜನರನ್ನು ಸೆಳೆಯುತ್ತದೆ.

ಬೃಹತ್ ವ್ಯಾಪಾರ ಪ್ರದರ್ಶನವು ಸುಮಾರು 500 ಮಿಲಿಯನ್ ಯುರೋಗಳನ್ನು ತರುವ ಮುನ್ಸೂಚನೆ ನೀಡಿದ್ದರಿಂದ, ಸಮ್ಮೇಳನದ ರದ್ದುಗೊಳಿಸುವ ನಿರ್ಧಾರವು ಬಾರ್ಸಿಲೋನಾಗೆ ದೊಡ್ಡ ಹೊಡೆತ ಎಂದು ಮಾಧ್ಯಮಗಳು ವರದಿ ಮಾಡಿವೆ (ಏಜೆನ್ಸೀಸ್​)