ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಈಗ ದೇಶದ ಕೋವಿಡ್ ಪೀಡಿತರ ರಾಜಧಾನಿಯಾಗಿ ಬದಲಾಗಿದೆ. ರಾಜಧಾನಿಯಲ್ಲೀಗ ಸೋಂಕಿತ ಸಂಖ್ಯೆ 80 ಸಾವಿರ ತಲುಪಿದೆ. ಈ ಪೈಕಿ 28 ಸಾವಿರ ಸಕ್ರಿಯ ಪ್ರಕರಣಗಳಿವೆ. 2,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಪ್ರತಿದಿನ ಅತ್ಯಧಿಕ ಪ್ರಕರಣಗಳು ದೆಹಲಿಯಲ್ಲಿ ವರದಿಯಾಗುತ್ತಿವೆ. ಜತೆಗೆ, ಚಿಕಿತ್ಸೆ ನೀಡಲು ಆಸ್ಪತ್ರೆಗಳ ಬೆಡ್ಗಳು ಸಾಕಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ದೆಹಲಿ ಹೊರವಲಯದಲ್ಲಿ ಅತಿ ದೊಡ್ಡ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
ರಾಧಾ ಸಓಮಿ ಸತ್ಸಂಗ ಬ್ಯಾಸ ಕೇಂದ್ರದಲ್ಲಿ 10 ಸಾವಿರ ಬೆಡ್ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಶನಿವಾರ ಕೇಂದ್ರದಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.
ದಕ್ಷಿಣ ದೆಹಲಿ ಛತ್ತರಪುರ್ ಪ್ರದೇಶದಲ್ಲಿ ಈ ಕೇಂದ್ರಕ್ಕೆ ಸರ್ದಾರ್ ಪಟೇಲ್ ಕೋವಿಡ್ ಕೇರ್ ಮತ್ತು ಆಸ್ಪತ್ರೆ ಎಂದು ಹೆಸರಿಸಲಾಗಿದೆ. ಇದು ಇಂಡೋ-ಟಿಬೇಟಿಯನ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ನ ನಿರ್ವಹಣೆಯಲ್ಲಿರಲಿದೆ. ಇದು 15 ಫುಟ್ಬಾಲ್ ಅಂಕಣಗಳಷ್ಟು ವಿಸ್ತಾರವಾಗಿದೆ. ಒಂದು ಕಡೆಯಲ್ಲಿ ಗುಣಲಕ್ಷಣ ಹೊಂದಿರದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಂದೆಡೆ, ಸಂಪೂರ್ಣ ಚಿಕಿತ್ಸಾ ಸೌಲಭ್ಯ ಹೊಂದಿರುವ ಆಸ್ಪತ್ರೆ ರೂಪಿಸಲಾಗಿದೆ.
ದೆಹಲಿಯಲ್ಲಿ ಜೂನ್ ಅಂತ್ಯಕ್ಕೆ ಕೋವಿಡ್ ರೋಗಿಗಳ ಸಂಖ್ಯೆ ಒಂದು ಲಕ್ಷಕ್ಕೆ ತಲುಪಲಿದೆ. ಈ ಕಾರಣಕ್ಕಾಗಿ 15,000 ಹೆಚ್ಚುವರಿ ಬೆಡ್ಗಳು ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಇಲ್ಲಿ 10 ಸಾವಿರ ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ರಾಧಾ ಸಓಮಿ ಸತ್ಸಂಗ ಬ್ಯಾಸ ಕೇಂದ್ರವು ಆಧ್ಯಾತ್ಮಿಕ ಸಂಘಟನೆಯಾಗಿದ್ದು, 1861 ಶಿವ ದಯಾಲ್ ಸಿಂಗ್ ಇದರ ಸಂಸ್ಥಾಪಕರು. ಪ್ರಸ್ತುತ ಗುರಿಂದರ್ ಸಿಂಗ್ ಇದರ ಮುಖ್ಯಸ್ಥರಾಗಿದ್ದಾರೆ. ಇದರ ಕೇಂದ್ರ ಕಚೇರಿಯು ಪಂಜಾಬ್ನ ಬಿಯಾಸ್ ನದಿ ತೀರದಲ್ಲಿದೆ.