ನ್ಯೂಸ್

ನಾನ್​ ವೆಜ್​ ಬ್ಯಾನ್​ ಮಾಡಿದ ವಿಶ್ವದ ಪ್ರಥಮ ನಗರ ಯಾವುದು ಗೊತ್ತಾ? ಭಾರತದಲ್ಲೇ ಇದೆ! ಅಚ್ಚರಿ ಉತ್ತರ ಇಲ್ಲಿದೆ.... Non Veg

Non Veg : ನಮ್ಮ ಭಾರತದಲ್ಲಿ ಎರಡು ರೀತಿಯ ಆಹಾರ ಪ್ರಿಯರಿದ್ದಾರೆ. ಒಂದು ಸಸ್ಯಾಹಾರಿ ಮತ್ತು ಇನ್ನೊಂದು ಮಾಂಸಾಹಾರಿ. ಅಚ್ಚರಿಯ ಸಂಗತಿ ಏನೆಂದರೆ, ನಮ್ಮ ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆ ಸಸ್ಯಾಹಾರಿಗಳ ಸಂಖ್ಯೆಗಿಂತಲೂ ಹೆಚ್ಚಿದೆ. ಎಷ್ಟರ ಮಟ್ಟಿಗೆ ಅಂದರೆ, ಮಾಂಸಾಹಾರ ಅಂದರೆ ಪ್ರಾಣ ಬಿಡುವವರು ಕೂಡ ಇದಾರೆ.

ನಾನ್​ ವೆಜ್​ ಮಾಡಲಿಲ್ಲ ಅಂತ ಎಷ್ಟೋ ಸಭೆ ಸಮಾರಂಭಗಳು ಅರ್ಧದಲ್ಲೇ ರದ್ದಾದ ಉದಾಹರಣೆಗಳು ಸಹ ನಮ್ಮ ಕಣ್ಣ ಮುಂದಿದೆ. ದಿನಕ್ಕೆ ಒಂದು ಪೀಸ್​ ಮಾಂಸ ತಿನ್ನದೇ ಹೋದರೆ ಸಮಾಧಾನ ಆಗುವುದಿಲ್ಲ ಎಂದು ಹೇಳೋರು ಕೂಡ ಇದಾರೆ. ಅಷ್ಟರಮಟ್ಟಿಗೆ ನಾನ್​ ವೆಜ್​ಗೆ ತುಂಬಾ ಅಡಿಕ್ಟ್​ ಆಗಿದ್ದಾರೆ. ಆದರೆ, ಭಾರತದ ಈ ಒಂದು ನಗರದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ನಾನ್​ ವೆಜ್​ ಮಾರುವಂತಿಲ್ಲ. ಅಂದರೆ, ಅಕ್ಷರಷಃ ಈ ನಗರದಲ್ಲಿ ನಾನ್​ ವೆಜ್​ ಅನ್ನು ಬ್ಯಾನ್​ ಮಾಡಲಾಗಿದೆ. ಒಂದು ವೇಳೆ ಮಾರಾಟ ಮಾಡಿದರೆ ಶಿಕ್ಷೆ ಸಹ ವಿಧಿಸಲಾಗುತ್ತದೆ.

ಅಷ್ಟಕ್ಕೂ ಆ ನಗರ ಯಾವುದೂ ಅಂತೀರಾ ಅದೇ ಗುಜರಾತಿನ ಭಾವನಗರ ಜಿಲ್ಲೆಯ ಪಾಲಿಟಾನಾ ನಗರ. ಈ ನಗರದಲ್ಲಿ ನಾನ್​ ತಿನ್ನುವುದು ಮಹಾ ಅಪರಾಧ. ತಿಂದರೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಪಾಲಿಟಾನಾ ನಗರವು ಮಾಂಸವನ್ನು ಬ್ಯಾನ್​ ಮಾಡಿದ ವಿಶ್ವದ ಮೊದಲ ನಗರ ಎಂದು ಪ್ರಸಿದ್ಧವಾಗಿದೆ. ಇಲ್ಲಿ ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿಗಳನ್ನು ಬಲಿ ಕೊಡುವುದಿಲ್ಲ ಮತ್ತು ಕೊಲ್ಲುವುದೂ ಇಲ್ಲ. ಇಲ್ಲಿ ಮಾಂಸ ಮಾರಾಟವೂ ಕೂಡ ಕಾನೂನು ಬಾಹಿರವಾಗಿದೆ.

ಕಾರಣವೇನು?

ಅಂದಹಾಗೆ ಈ ಪಾಲಿಟಾನ ನಗರದಲ್ಲಿ ಹೆಚ್ಚಾಗಿ ಜೈನರು ವಾಸಿಸುತ್ತಾರೆ. 200ಕ್ಕೂ ಹೆಚ್ಚು ಜೈನ ಸನ್ಯಾಸಿಗಳ ಪ್ರತಿಭಟನೆಯ ನಂತರ ಮಾಂಸಾಹಾರಿ ಆಹಾರದ ಮೇಲೆ ನಿಷೇಧ ಹೇರಲಾಯಿತು. ನಗರದಲ್ಲಿನ ಸುಮಾರು 250 ಮಾಂಸದಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದ ಜೈನರು, ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ಮತ್ತು ಮಾಂಸ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಿದರು. ಹೀಗಾಗಿ ಜೈನ ಸಮುದಾಯದ ಧಾರ್ಮಿಕ ಭಾವನೆಗಳನ್ನು ಗೌರವಿಸಲು ಕಾನೂನನ್ನು ಜಾರಿಗೆ ತರಲಾಯಿತು. ಇನ್ನು ಪಾಲಿಟಾನದಲ್ಲಿ ಜೈನರಿಗೆ ಸಂಬಂಧಿಸಿದ ಅನೇಕ ಪುಣ್ಯಕ್ಷೇತ್ರಗಳಿವೆ. ಮಾಂಸಾಹಾರ ಸೇವನೆಯು ಅನೇಕ ಕೆಟ್ಟ ಅಭ್ಯಾಸಗಳಿಗೆ ಕಾರಣವಾಗುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ.

ನಾನ್​ ವೆಜ್​ ನಿಷೇಧದ ನಂತರ, ಪಾಲಿಟಾನಾದಲ್ಲಿ ಕೇವಲ ಸಸ್ಯಾಹಾರಿ ಹೋಟೆಲ್​ ಮತ್ತು ರೆಸ್ಟೋರೆಂಟ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ನಗರವು ಈಗ ರುಚಿಕರವಾದ ಸಸ್ಯಾಹಾರಿ ಭಕ್ಷ್ಯಗಳ ತಾಣವಾಗಿದೆ. ಇದು ಸಸ್ಯಾಹಾರಿಗಳಿಗೆ ಮತ್ತು ಮಾಂಸ-ಮುಕ್ತ ಜೀವನಶೈಲಿಯನ್ನು ಅನುಭವಿಸಲು ಬಯಸುವವರಿಗೆ ಸ್ವರ್ಗವಾಗಿದೆ.

ಅಂದಹಾಗೆ ಪ್ರಮುಖ ಜೈನ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಪಾಲಿಟಾನಾವು ಅದ್ಭುತವಾದ ಶತ್ರುಂಜಯ ಬೆಟ್ಟದ ದೇವಾಲಯಗಳಿಗೆ ನೆಲೆಯಾಗಿದೆ. ಇಲ್ಲಿನ ಅಹಿಂಸಾ ಧರ್ಮವೂ ನಗರದ ಪಾವಿತ್ರ್ಯತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಪ್ರಪಂಚದಾದ್ಯಂತ ಹೆಚ್ಚು ಪ್ರವಾಸಿಗರನ್ನು ಮತ್ತು ಯಾತ್ರಿಕರನ್ನು ಈ ನಗರ ಆಕರ್ಷಿಸುತ್ತದೆ. (ಏಜೆನ್ಸೀಸ್​)