ನ್ಯೂಸ್

ಎರಡು ದೇಶಗಳ ನಡುವೆ ಸುಂಕ ಸಮರ; ಚೀನಾ ಮೇಲೆ 104% ಸುಂಕ ವಿಧಿಸಿದ ಅಮೆರಿಕ; Donald-trump

Donald-trump | ಸುಂಕದ ವಿಷಯದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ ಶುರುವಾಗಿದೆ. ಅಮೆರಿಕ ಮತ್ತು ಚೀನಾ ದೇಶಗಳ ನಡುವಿನ ವ್ಯಾಪಾರ ಯುದ್ಧ ಮತ್ತಷ್ಟು ಉಲ್ಬಣಗೊಂಡಿದೆ. ಟ್ರಂಪ್ ಟಾರಿಫ್ ಘೋಷಣೆಯಿಂದ ತಳಮಳಗೊಂಡಿದ್ದ ಚೀನಾ ಅಮೆರಿಕ ಸರಕುಗಳ ಮೇಲೆ ಸುಂಕ ಹೆಚ್ಚಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಈಗ ಎಲ್ಲಾ ಚೀನೀ ಸರಕುಗಳ ಮೇಲಿನ ಸುಂಕವನ್ನ ಅಮೆರಿಕ ಹೆಚ್ಚಳ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವದ ಅನೇಕ ದೇಶಗಳ ವಸ್ತುಗಳ ಮೇಲೆ ಆಮದು ಸುಂಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದು ಚೀನಾಕ್ಕೆ 104% ವಿಧಿಸಿದೆ. ಚೀನಾದ ಮೇಲಿನ ಅಮೆರಿಕದ ಹೊಸ ಸುಂಕಗಳು ಇಂದಿನಿಂದಲೇ (ಏ.9) ಜಾರಿಗೆ ಬರಲಿವೆ.

ಚೀನಾ ಪ್ರಧಾನಿ ಲಿ ಕ್ವಿಯಾಂಗ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ನಡುವೆ ನಡೆದ ದೂರವಾಣಿ ಸಂಭಾಷಣೆಯ ಕೆಲವೇ ಗಂಟೆಗಳ ನಂತರ ಅಮೆರಿಕ ಈ ಕ್ರಮ ಕೈಗೊಂಡಿದೆ.

ಕಳೆದ ಏಪ್ರಿಲ್ 2ರಂದು ಡೊನಾಲ್ಡ್‌ ಟ್ರಂಪ್‌ ಘೋಷಣೆ ಮಾಡಿದ ಸುಂಕ ನೀತಿ ಅನ್ವಯ, ಚೀನಾ ಮೇಲೆ ಅಮೆರಿಕವು ಶೇ. 54ರಷ್ಟು ತೆರಿಗೆ ವಿಧಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕದ ಸುಂಕ ನೀತಿಗಳಿಗೆ ಸೆಡ್ಡು ಹೊಡೆದಿರುವ ಚೀನಾ ಕೂಡ ಅಮೆರಿಕದ ವಸ್ತುಗಳ ಮೇಲೆ ಶೇ.34ರಷ್ಟು ತೆರಿಗೆ ವಿಧಿಸಿತ್ತು. ಇದನ್ನು ಹಿಂಪಡೆಯುವಂತೆ ಚೀನಾಗೆ ಡೊನಾಲ್ಡ್‌ ಟ್ರಂಪ್‌ ಅವರು ನೀಡಿದ್ದ 24 ಗಂಟೆಗಳ ಗಡುವು ಮುಗಿದಿದ ಕಾರಣ, ಚೀನಾ ಮೇಲೆ ಬರೋಬ್ಬರಿ ಶೇ.104ರಷ್ಟುತೆರಿಗೆ ವಿಧಿಸಲಾಗಿದೆ. ದು ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಟ್ರಂಪ್​ ಹೇಳಿದ್ದೇನು?

ಚೀನಾ ಮೇಲಿನ ಅಧಿಕ ಸುಂಕ ಘೋಷಣೆ ಬಗ್ಗೆ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯೆ ನೀಡಿದ್ದು, ನಾನು ಚೀನಾಗೆ ಮತ್ತೊಂದು ಅವಕಾಶವನ್ನು ನೀಡಲು ಸಿದ್ಧನಿದ್ದೇನೆ. ಅಸಲಿಗೆ ಚೀನಾ ನಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಆದರೆ ಮಾತುಕತೆಯನ್ನು ಹೇಗೆ ಆರಂಭಿಸಬೇಕು ಎಂಬುದು ತಿಳಿಯದೇ ಒದ್ದಾಡುತ್ತಿದೆ. ನಾವು ಅವರ ಕರೆಗಾಗಿ ಕಾಯುತ್ತಿದ್ದೇವೆ ಎಂದು ಟ್ರಂಪ್​ ಹೇಳಿದ್ದಾರೆ.

ಚೀನಾ ವಕ್ತಾರರು ಹೇಳಿದ್ದೇನು?

ಇನ್ನೂ ಈ ಬಗ್ಗೆ ಚೀನಾ ರಾಯಭಾರ ಕಚೇರಿಯ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, ಟ್ರಂಪ್ ಆಡಳಿತ ವಿಧಿಸಿರುವ ಸುಂಕಗಳಿಂದ ಎದುರಾಗುವ ಸವಾಲುಗಳನ್ನು ನಿವಾರಿಸಲು ಭಾರತ ಮತ್ತು ಚೀನಾ ಒಟ್ಟಾಗಿ ನಿಲ್ಲಬೇಕು ಎಂದಿದ್ದಾರೆ. ಚೀನಾ ಹಾಗೂ ಭಾರತ ಆರ್ಥಿಕ ಮತ್ತು ವ್ಯಾಪಾರ ಸಂಬಂಧವು ಪರಸ್ಪರ ಲಾಭವನ್ನು ಆಧರಿಸಿದೆ. ಅಮೆರಿಕದ ಸುಂಕದ ದುರುಪಯೋಗವನ್ನು ಎದುರಿಸುತ್ತಿರುವ ಈ ಎರಡೂ ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ತೊಂದರೆಗಳನ್ನು ನಿವಾರಿಸಲು ಒಟ್ಟಾಗಿ ನಿಲ್ಲಬೇಕು ಎಂದು ವಕ್ತಾರ ಯು ಜಿಂಗ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಮಾಡಿದ್ದಾರೆ.

(ಏಜೆನ್ಸೀಸ್)