ನ್ಯೂಸ್

ಅಮ್ಮಾ ಎಂದರೆ ಏನೋ ಹರುಷವೂ...: ಓದುಗರ ಭಾವನೆಗಿಲ್ಲಿ ಅಕ್ಷರ ರೂಪ...

chandru

ಮಮತೆ, ತ್ಯಾಗ, ಕರುಣೆಯ ಪ್ರತಿರೂಪವಾಗಿರುವ ಅಮ್ಮನ ದಿನ ಇಂದು. ಈ ನಿಮಿತ್ತ, ಬದುಕು ರೂಪಿಸಿರುವ ಅಮ್ಮನನ್ನು ಸ್ಮರಿಸಲು ವಿಜಯವಾಣಿ ಕರೆ ನೀಡಿತ್ತು. ಇದಕ್ಕೆ ನಾಲ್ಕು ಸಾವಿರಕ್ಕೂ ಅಧಿಕ ಓದುಗರು ಇ-ಮೇಲ್ ಮೂಲಕ ಅನಿಸಿಕೆ ಹಂಚಿಕೊಂಡಿದ್ದು, ತಮ್ಮ ಜೀವನದಲ್ಲಿ ವಿಶೇಷ ಪಾತ್ರ ವಹಿಸಿರುವ ಅಮ್ಮನನ್ನು ನೆನೆದಿದ್ದಾರೆ. ಈ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಇಷ್ಟೊತ್ತಿಗೆ 21ನೇ ವೈದಿಕ ಆಗಿರುತ್ತಿತ್ತು!

ನನ್ನ ಅಮ್ಮನಿಗೆ ನಾನು ಮತ್ತು ಅಣ್ಣ ಇಬ್ಬರು ಮಕ್ಕಳು. ಒಮ್ಮೆ ಶೃಂಗೇರಿಗೆ ಹೋಗಿದ್ದೆವು. ಆಗ ನನಗೆ 5 ವರ್ಷ. ನಾನು ಬೇಗ ಊಟ ಮಾಡಿ ತುಂಬಿ ಹರಿಯುತ್ತಿದ್ದ ಹೊಳೆಗೆ ಕೈ ತೊಳೆಯಲು ಹೋಗಿದ್ದೆ. ಅಮ್ಮನ ಊಟ ಮುಗಿದಿರಲಿಲ್ಲ. ಅದ್ಯಾಕೋ ಅಮ್ಮನಿಗೆ ಸಂಕಟ ಆದಂತಾಗಿ ನಾನು ಇರುವಲ್ಲಿ ಓಡಿ ಬಂದಿದ್ದಳು. ಆಕೆ ಬರುವುದು ಸ್ವಲ್ಪ ಹೊತ್ತಾಗಿದ್ದರೂ ಇಷ್ಟು ಹೊತ್ತಿಗೆ ನನ್ನ 21 ನೇ ವೈದಿಕ ಆಗಿರುತಿತ್ತು! ನಾವು ಶಾಲೆಗೆ 15 ಕಿ. ಮೀ ದೂರ ಇರುವ ಸಾಗರ ತಾಲೂಕಿಗೆ ಬರಬೇಕು. ನಮ್ಮ ಮನೆಯಿಂದ ಬಸ್ ನಿಲ್ದಾಣಕ್ಕೆ 2 ಕಿಮೀ ನಡೆದು ಹೋಗಬೇಕು. ದಿನವೂ ನನ್ನಮ್ಮ ತಪ್ಪದೇ ಬೆಳಗ್ಗೆ, ಸಂಜೆ ನಮ್ಮ ಜತೆ ಬರುತ್ತಿದ್ದರು. ಸತತ ಎಂಟು ವರ್ಷ ಅವರು ನಮ್ಮ ‘ಸೇವೆ’ ಮಾಡಿದ್ದಾರೆ!

| ರಶ್ಮಿ ಪಂಚಾಂಗ ಎಚ್.ಆರ್. ಹೊರಬೈಲ್, ಸೊರಬ

ತನ್ನನ್ನು ಬದುಕಿಸುವೆಯಾ ಎಂದು ಕೇಳಿದ್ದಳಾಕೆ!

ತನ್ನ ಬದುಕನ್ನೇ ಪಣಕ್ಕಿಟ್ಟು ಮಕ್ಕಳು ಮೂವರ ಬದುಕಿಗೊಂದೊಂದು ಕನ್ನಡಿಯಾದವಳು ನನ್ನಮ್ಮ . ಅದೊಮ್ಮೆ ಅರ್ಬುದ ರೋಗಕ್ಕೆ ತುತ್ತಾಗಿಬಿಟ್ಟಳು. ‘ನನ್ನ ಬದುಕಿಸುತ್ತೀಯಾ ಅಂತಾ ವಚನ ಕೊಡು’ಎಂದಳು ಅಮ್ಮ. ಹೂಂ ಅಂದುಬಿಟ್ಟೆ. ನನ್ನ ಕೈಲಿ ಬದುಕಿಸುವುದು ಸಾಧ್ಯವೇ? ಅನ್ನುವುದನ್ನು ಮರೆತು ಹೋರಾಡಿದೆ. ಹೋರಾಡಿದೆ. ಭಗವಂತನನ್ನು ಪೂಜಿಸಿದೆ. ಕಾರ್ಯಸಾಧಿಸಲಿಲ್ಲ. ಸಂಧ್ಯಾ ಸಮಯದಲ್ಲಿ ನನ್ನಮ್ಮ ನನಗೇ ಮಗಳಾಗಿಬಿಟ್ಟಳು. ನನ್ನ ಮಡಿಲವಳಿಗೆ ತೊಟ್ಟಿಲಾಯಿತು. ಜೋಗುಳದ ಲಾಲಿ ಹಾಡಿ ಹಾಡಿ ತೂಗಿದೆ ತೂಗಿದೆ. ನನ್ನಮ್ಮ ಹಸನ್ಮುಖದಿಂದಲೇ ಮುತ್ತೈದೆಯಾಗಿ ಶಾಶ್ವತ ಕನ್ನಡಿಯಲ್ಲಿಯೇ ಅಮರಳಾದಳು. ತನ್ನ ಅಂತಿಮ ಪಯಣದ ಸಮಯದಲ್ಲಿಯೂ ನಮಗೆ ಪಾರಮಾರ್ಥಿಕ , ಲೌಕಿಕ ಪಾಠವನ್ನು ಮಾಡಿ ಮಹಾಗುರುವಾದಳನ್ನು ಬದುಕಿಸುತ್ತೇನೆಂದು ಭರವಸೆ ಕೊಟ್ಟ ನಾನು ವಿಧಿಯಾಟದ ಮುಂದೆ ಶೂನ್ಯಳಾದೆ. ಅವಳು ಹಾಕಿಕೊಟ್ಟ ದಾರಿಯಲ್ಲಿಯೇ ಅವಳನ್ನು ಕಾಣುತ್ತಿರುವ ಜಗತ್ತಿನಲ್ಲಿಯೇ ನಮ್ಮಶ್ರೇಷ್ಠ ಅಮ್ಮನಿಗೆ ಕೋಟಿ ಕೋಟಿ ನಮನಗಳು.

| ರಾಜಾಮಣಿ ಕುಲಕರ್ಣಿ ಬಾಗಲಕೋಟೆ

ನನ್ನ ಹುಟ್ಟು ಹಲ್ಲಿನಿಂದ ಚುಚ್ಚುಮಾತು ಕೇಳಿದಾಕೆ!

ನಾಲ್ಕನೆಯ ಮಗುವಾಗಿ ಜನಿಸಿದ ನನಗೆ ಹುಟ್ಟುವಾಗಲೇ ಎರಡು ಹಲ್ಲಿತ್ತು. ಅಪಶಕುನ ಮಗು ಎಂದು ಕೆಲವರು ಹೇಳಿದ್ದರಿಂದ ನಾಲ್ಕನೇ ಮಗು ಬೇಡವೆಂದಿದ್ದ ನನ್ನಜ್ಜಿಯ ಕೋಪ ನೆತ್ತಿಗೇರಿತ್ತು. ಅದಕ್ಕಾಗಿ ನನಗೆ ನಾಮಕರಣ ಕಾರ್ಯಕ್ರಮವನ್ನೂ ಅಜ್ಜಿ ಮಾಡಕೊಡಲಿಲ್ಲ. ಕೊನೆಯವರೆಗೂ ಅತ್ತೆಯ ಮೂದಲಿಕೆ ಮಾತನ್ನು ನನ್ನಮ್ಮ ಕೇಳುತ್ತಲೇ ಇರಬೇಕಾಯಿತು. ಅಮ್ಮನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ನನ್ನಾಸೆ ಕೊನೆಗೂ ಈಡೇರಲೇ ಇಲ್ಲ. ಅವರ 60ನೇ ವಯಸ್ಸಿಗೆ ಒಕ್ಕರಿಸಿಕೊಂಡು ಬಿಡ್ತು ಸೊರಿಯಾಸಿಸ್ ಎಂಬ ಕಾಯಿಲೆ. ನನ್ನ ತಂದೆಯವರೂ ಬಹಳಕಾಲ ಉಳಿಯಲಿಲ್ಲ. ನಾನು ಶಿಕ್ಷಕನಾಗುವುದರೊಳಗಾಗಿಯೇ ಇಹಲೋಕ ತ್ಯಜಿಸಿಯಾಗಿತ್ತು. ಅವರನ್ನು ಅಮ್ಮ ಆರೈಕೆ ಮಾಡಿದ ಪರಿ ಅದ್ಭುತವಾದದ್ದು. ಆದರೆ ಅಮ್ಮ ಕೂಡ ಪಾರ್ಶ್ವವಾಯುವಾಗಿ ಬಹಳ ನರಳಿದರು. ಮುಂದಿನ ಜನ್ಮದಲ್ಲಾದರೂ ಅಮ್ಮನ ಋಣ ತೀರಿಸುವ ಭಾಗ್ಯ ಸಿಗಲಿ.

| ರಾಜಶೇಖರ ವಿ ಯಾಗಂಟಿ ಶಿಕ್ಷಕರು, ಚಿಂತಾಮಣಿ

ಮಾತೃಹೃದಯದೊಳಗೊಂದು ಸುತ್ತು

ಮಾಸದ ನಗು, ಬತ್ತದ ಉತ್ಸಾಹ, ನಿರ್ಮಲ ಮನಸ್ಸು, ವಿಶಾಲ ಹೃದಯ, ಅಗಾಧ ಪ್ರೀತಿ,ಯಾವುದಕ್ಕೂ ಆಸೆ ಪಡದ ತೃಪ್ತ ಭಾವ... ನನ್ನ ಅಮ್ಮನ ಬಗ್ಗೆ ಹೇಳಹೋದರೆ ಎಷ್ಟು ಪದಗಳೂ ಸಾಕಾಗದು. ತುಂಬು ಸಂಸಾರದ ನೊಗ ಹೊತ್ತು ಉತ್ತಮ ಸಂಸ್ಕಾರ ನೀಡಿ, ತಿದ್ದಿ ಬುದ್ಧಿ ಹೇಳಿದ ಒಲವಿನ ಅಮ್ಮ ಈಕೆ. ಬಿಡುವಿನ ವೇಳೆಯಲಿ ರಂಗವಲ್ಲಿ,ಹತ್ತಿ-ಬತ್ತಿ, ಹಾಡು-ಹಸೆ-ಚಿತ್ತಾರ,ಕಸೂತಿ.. ಅಟ-ಪಾಠ. ಮನೆಯ ಒಪ್ಪ ಓರಣ, ತಿಂಡಿ-ಊಟ, ಅತಿಥಿ ಸತ್ಕಾರ, ಕಸ, ಮುಸುರೆ, ಪಾತ್ರೆ, ಹಬ್ಬ ಹರಿದಿನಗಳಲ್ಲಿ ಪುರುಸೊತ್ತಿಲ್ಲದ ಕೆಲಸ. ಬಾಯಲ್ಲಿ ನೀರೂರಿಸುವ ಸೆವೆನ್ ಕಪ್, ಅನಾನಸ್ ಕೇಸರಿಬಾತ್, ಸಜ್ಜಿಗೆ, ಮಿಠಾಯಿ, ಮೈಸೂರು ಪಾಕ್, ಅಕ್ಕಿ ಹಲ್ವ, ಗೋಧಿ ಹಲ್ವ, ತರಹೇವಾರಿ ಉಂಡೆಗಳು, ವಿವಿಧ ಬಗೆಯ ಪಾಯಸ....ಓಹ್! ಅನನ್ಯ ಕಾಳಜಿ, ಸರಳತೆ, ಸೌಮ್ಯಸ್ವಭಾವ,ಸ್ಪಂದಿಸುವ ಗುಣ ಇವೆಲ್ಲ ನನಗೆ ಇಂದಿಗೂ ಸ್ಪೂರ್ತಿ.. ಆಕೆ ಸಂಭ್ರಮಿಸದ ದಿನಗಳಿಲ್ಲ. ಈ ಎಲ್ಲ ಮೌಲ್ಯಗಳೇ ಜೀವನದುದ್ದಕ್ಕೂ ನನ್ನ ಕಾಪಾಡುವಲ್ಲಿ ಯಶಸ್ವಿಯಾಗಿವೆ. ವಾಸ್ತವ ಜಗತ್ತಿನಲ್ಲಿ ಬದುಕಲು ಕಲಿಸಿದ ನಿನಗೆ ಅನಂತ ಧನ್ಯವಾದಗಳು...

| ವಿನೋದಕುಮಾರಿ ಹೆಚ್.ವಿ. ಉಪನ್ಯಾಸಕರು, ಡಯೆಟ್, ಶಿವಮೊಗ್ಗ

ಎದೆಗುಂದದ ಜೀವ

ಬಡತನಕ್ಕಿಂತ ಅಪ್ಪ ಅಮ್ಮನಲ್ಲಿ ನಾನು ಕಂಡದ್ದು ದುಡಿದು ತಿನ್ನುವ ಛಲ. ಇಬ್ಬರೂ ವ್ಯವಸಾಯ ಮಾಡಿ ಹಗಲಿರುಳು ಗಾಣದೆತ್ತಿನಂತೆ ದುಡಿದು ನಮ್ಮನ್ನು ಸಾಕಿ ವಿದ್ಯಾಭ್ಯಾಸ ಕೊಡಿಸಿದರು. ಇನ್ನೇನು ನಮ್ಮ ವಿದ್ಯಾಭ್ಯಾಸವೆಲ್ಲಾ ಒಂದು ಹಂತಕ್ಕೆ ಬಂದು ನಿಂತಿತು ಎಂದಾಗ ಅಪ್ಪನಿಗೆ ತೀವ್ರ ಅನಾರೋಗ್ಯ. ಅಪ್ಪನನ್ನು ನವಜಾತ ಶಿಶುವಿನ ರೀತಿಯಲ್ಲಿ ಆರೈಕೆ ಮಾಡಿವಾಗ ನನ್ನಮ್ಮ ಸಾಕ್ಷಾತ್ ದೇವತೆಯಂತೆ ಕಂಡಳು. ಆದರೆ ಅಪ್ಪ ಕೊನೆಯು ಸಿರೆಳೆದಾಗ ಅಮ್ಮನಿಗೆ ಬರಸಿಡಿಲು ಬಡಿದಿತ್ತು. ಅಪ್ಪನ ಸಾವು, ನಮ್ಮ ವಿದ್ಯಾಭ್ಯಾಸ, ವ್ಯವಸಾಯ ಎಲ್ಲವೂ ಅಮ್ಮನ ಹೇಗಲೇರಿದವು. ಕೂಡಿಟ್ಟ ಹಣ ಅಕ್ಕನ ಮದುವೆ ಮತ್ತು ಅಪ್ಪನ ಆಸ್ಪತ್ರೆಗೆ ಖರ್ಚಾಗಿತ್ತು. ಅದೆಷ್ಟೋ ರಾತ್ರಿ ನಿದ್ದೆಯನ್ನೂ ಮಾಡದೇ ಅಮ್ಮ ನಮಗಾಗಿ ದುಡಿದಳು. ಅರೆಕ್ಷಣವೂ ಪುರುಸೊತ್ತು ಇಲ್ಲದಂತೆ ಚಾಕರಿ ಮಾಡಿದಳು. ಆಕೆಯಿಂದಾಗಿ ನಾವೆಲ್ಲಾ ಮಕ್ಕಳು ಈಗ ನೆಲೆ ಕಂಡಿದ್ದೇವೆ.

| ಪವಿತ್ರ ನಾಗ್ ಶಿರಾ

ಅಪ್ಪನಾಗಿಯೂ ಸಲಹಿದೆ, ಏನೆಂದು ಹೇಳಲಿ?

25 ವರ್ಷ ಭಾರತೀಯ ಸೈನ್ಯದಲ್ಲಿ ನನ್ನಪ್ಪ ಕೆಲಸ ನಿರ್ವಹಿಸಿದ್ದರು. ಆಗೆಲ್ಲಾ ಅಮ್ಮನಾಗಿ, ಅಪ್ಪನಾಗಿ ನಮ್ಮನ್ನು ಸಲುಹಿದ್ದು ತಾಯಿಯೇ. ಆ ಸಮಯವನ್ನು ನೆನೆಸಿಕೊಂಡು ಅಮ್ಮಾ ನಿನ್ನ ಬಗ್ಗೆ ಬರೆಯಲು ಕುಳಿತರೆ ಪ್ರತಿ ಸಲವೂ ನಾನು ಖಾಲಿಯಾಗಿ ಬಿಡುತ್ತೇನೆ. ಬರೆಯಲು ಪದಗಳು ಸಿಗದೇ ಒದ್ದಾಡುತ್ತೇನೆ. ಸಂತೆಯಲ್ಲಿ ತಪ್ಪಿಸಿಕೊಂಡ ಮಗುವಂತಾಗಿ ಬಿಡುತ್ತೇನೆ. ಏನೇನೂ ತೋಚದು ಎಂದುಕೊಂಡಾಗ ನನ್ನ ಒಳಗಿನಿಂದ ಕಾವ್ಯವಾಗಿ ಹರಿದು ಬಿಡುತ್ತಿ , ಎದೆ ತುಂಬಿ ನನ್ನ ಎಲ್ಲವೂ ಆಗಿ ಬಿಡುತ್ತಿ, ನಿಜಕ್ಕೂ ನಾನು ಬಹಳ ಬಹಳ ಬಹಳ ಅದೃಷ್ಟವಂತ. ಅಮ್ಮ ಎಂದರೆ ನನಗೆ, ನನ್ನ ಬದುಕಿನ ಹಿರಿಮೆಯ ಗರಿ...

| ಅಜಿತ್ ನ. ಗಿರಿಭಟ್ಟನವರ್ ಧಾರವಾಡ

ಅಪ್ಪನ ಅಗಲಿಕೆಗೆ ಸಾಥ್ ಕೊಟ್ಟ ರೇಡಿಯೋ

ಅಪ್ಪನ ಅಗಲಿಕೆ ಅಮ್ಮನನ್ನು ಅಧೀರ ಮಾಡಿತ್ತು. ಆದರೆ ಅಪ್ಪ ಕೊಟ್ಟ ರೇಡಿಯೋನೇ ಅಮ್ಮನ ಬದುಕಿನುದ್ದಕ್ಕೂ ಸಾಥ್ ಕೊಟ್ಟಿತು. ಇಬ್ಬರು ಹೆಣ್ಮಕ್ಕಳ ಮದುವೆ ಮಾಡಿ, ಮಗನೂ ದೂರದ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋದಾಗ ಅಮ್ಮನ ಹಳ್ಳಿಯ ಒಬ್ಬೊಂಟಿ ಜೀವಕ್ಕೆ ಆಸರೆಯಾದದ್ದು ನನ್ನ ಅಜ್ಜಿಯ ಜತೆ ಇದೇ ರೇಡಿಯೋ. ಸಮಯ ಕಳೆಯಲು ರೇಡಿಯೋಗೂ ಬರಹಗಳನ್ನು ಬರೆದು ಕಳಿಸಲು ರೂಢಿಸಿಕೊಂಡರು. ಮಕ್ಕಳೊಡನೆ ಮಕ್ಕಳಾಗಿ ಬಿಡುವ ಆಕೆ ಒಂದು ಚಿಕ್ಕ ಮಗುವಿನಂತೆ ಕಾಣುತ್ತಾಳೆ. ಬದುಕಿನ ಹೋರಾಟದಲ್ಲಿ ಮಕ್ಕಳನ್ನೆಲ್ಲ ಒಂದು ಹಂತಕ್ಕೆ ತಲುಪಿಸಿದ್ದೇನೆ ಎನ್ನುವ ಸಮಾಧಾನ ಆಕೆಗಿದೆ. ಈಗ ಧಾರ್ವಿುಕ ಸಭೆ ಭಜನಾ ಮಂಡಳಿಗಳಲ್ಲಿ ತೊಡಗಿಸಿಕೊಂಡು ತನಗೆ ಗೊತ್ತಿರುವ ಕಲೆಗಳನ್ನ ಇತರರೊಂದಿಗೆ ಹಂಚಿಕೊಳ್ಳುತ್ತ ತಾನು ಹೊಸದನ್ನೇನೋ ಕಲಿಯುವ ಉತ್ಸಾಹದ ಚಿಲುಮೆ ಆಕೆ. ನನ್ನ ರೇಡಿಯೋ ಪ್ರೀತಿಗೂ ಅಮ್ಮನೇ ಕಾರಣ, ಇದೇ ನನ್ನ ಉದ್ಯೋಗವೂ ಆಗಿ ಹೊರಹೊಮ್ಮಿದೆ. ನಾನೀಗ ಆಕಾಶವಾಣಿ ವಿವಿಧ ಭಾರತಿ ಬೆಂಗಳೂರು ಕೇಂದ್ರದಲ್ಲಿ ಅರೆಕಾಲಿಕ ಉದ್ಘೋಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಅಮ್ಮಾ ಅವರಿಗೇ ಗೊತ್ತಿಲ್ಲದಂತೆ ಬಿತ್ತಿದ್ದ ಆಸೆಯ ಬೀಜವೊಂದು ಮೊಳಕೆಯೊಡೆದು ಇದೀಗ ಚಿಗುರೊಡೆದಿದೆ ಅನ್ನುವ ತೃಪ್ತಿಯ ಭಾವ ನನ್ನಮ್ಮನದಾಗಿದೆ.

| ರಾಧಾ ಕೆ ಭಟ್ ಬೆಂಗಳೂರು