Rural girl Drinking water...
ಬೆಂಗಳೂರು: ಜಲ ಜೀವನ್ ಮಿಷನ್ ಯೋಜನೆಯಡಿ 2024ರೊಳಗೆ ಪ್ರತಿ ಮನೆಗೂ ನಲ್ಲಿ ನೀರು ಕೊಡಬೇಕೆಂದು ನಿರ್ಧರಿಸಿದ್ದು, ಈ ಯೋಜನೆಗೆ ಅಗತ್ಯವಾದ ರಾಜ್ಯದ ಪಾಲಿನ ಹಣವನ್ನು ಹೊಂದಿಸಲು ವಿಶ್ವಬ್ಯಾಂಕ್ ನೆರವು ಪಡೆಯಲು ಸರ್ಕಾರ ಮುಂದಾಗಿದೆ.
ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಒಟ್ಟು 9,152 ಕೋಟಿ ರೂ. ಯೋಜನೆಯಾಗಿದ್ದು, ಕೇಂದ್ರದ ಪಾಲು ಶೇ.45, ರಾಜ್ಯದ ಶೇ.45 ಮತ್ತು ಶೇ.10 ಸ್ಥಳೀಯ ಸಂಸ್ಥೆ ಕೊಡುಗೆಯಾಗಿರುತ್ತದೆ. ರಾಜ್ಯದ ಪಾಲನ್ನು ಬಳಸಲು ವಿಶ್ವಬ್ಯಾಂಕ್ನಿಂದ ಸಾಲ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ಮೊದಲ ಆದ್ಯತೆಯಾಗಿ ನೀರಿನ ಟ್ಯಾಂಕ್ ಇರುವಲ್ಲಿ ನಲ್ಲಿ ಸಂಪರ್ಕ ಇಲ್ಲದ ಮನೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ, ಎರಡನೇಯದಾಗಿ ನೀರಿನ ಟ್ಯಾಂಕ್ ಇಲ್ಲದ ಕಡೆ ನಿರ್ಮಾಣ ಮಾಡಿ ಮನೆಮನೆಗೆ ನೀರೊದಗಿಸಲಾಗುತ್ತದೆ. ಮೂರನೇ ಹಂತವಾಗಿ ಸುಸ್ಥಿರ ಜಲಮೂಲ ಇರುವೆಡೆ ನೀರನ್ನು ಬಳಸಿಕೊಂಡು ಯೋಜನೆ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿ ಕಬ್ಬಳಿ ಗ್ರಾಮದ ವಿವಿಧ ಸರ್ವೆ ನಂಬರ್ಗಳಲ್ಲಿ ಒಟ್ಟು 22.36 ಎಕರೆ ಜಮೀನನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ ಸಚಿವರು, ಮಾರ್ಗಸೂಚಿ ದರದ ಶೇ.25 ಪಡೆದು ಜಮೀನು ಕೊಡಲು ನಿರ್ಣಯಿಸಲಾಗಿದೆ ಎಂದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಶಾಲೆ, ಹಾಸ್ಟೆಲ್, ಸಭಾ ಭವನ, ಕೌಶಲ ಕೇಂದ್ರ, ಅನಾಥಾಶ್ರಮ ಇತರ ಕಲ್ಯಾಣ ಕೇಂದ್ರ ಆರಂಭಿಸಲು ಜಾಗ ಕೊಡಬೇಕೆಂದು ಮನವಿ ಮಾಡಿದ್ದರು. ಅಲ್ಲೊಂದು ದೇವಸ್ಥಾನ ಇದ್ದು ಅದನ್ನು ನಿರ್ವಹಿಸಬೇಕೆಂಬ ಸೂಚನೆಯೊಂದಿಗೆ ಜಾಗ ಕೊಡಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.
- ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾಮಗಾರಿಯ 19.87 ಕೋಟಿ ರೂ. ಪರಿಷ್ಕೃತ ಅಂದಾಜಿಗೆ, ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ 16.80 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ.
- ಉಡುಪಿ ಜಿಲ್ಲೆ ಕಾಪು ತಾಲೂಕು ಶ್ರೀ ಜನಾರ್ಧನ ದೇವಾಲಯಕ್ಕೆ ಸೇರಿದ ಪಡು ಗ್ರಾಮದ ಸರ್ವೆ ನಂ. 37/10ರಲ್ಲಿರುವ 0.10 ಎಕರೆ ಜಾಗವನ್ನು ಕಾಪು ಬಂಟರ ಸಂಘಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರು.
- ಮಾರುತಿ ಎಜುಕೇಷನ್ ಟ್ರಸ್ಟ್ಗೆ ಶಾಲೆ ನಡೆಸಲು ದೊಡ್ಡಬಳ್ಳಾಪುರ ತಾಲೂಕು ರಾಜಘಟ್ಟ ಗ್ರಾಮದ ಸ.ನಂ.197ರಲ್ಲಿ ನೀಡಲಾದ 2.08 ಎಕರೆ ಜಮೀನಿನ ಗುತ್ತಿಗೆ ಮೊತ್ತ ಪರಿಷ್ಕರಣೆ.
- ಮೈಸೂರು ಜಿಲ್ಲೆ ಹುಣಸೂರು ತಾಲೂಕು ಮೂಕನಹಳ್ಳಿ ಗ್ರಾಮದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ತಾಲೂಕು ಒಕ್ಕಲಿಗರ ಸಂಘಕ್ಕೆ ಮಂಜೂರು ಮಾಡಿರುವ 2 ಎಕರೆ ಜಮೀನಿನ ಉಪಯೋಗದ ಉದ್ದೇಶ ಮಾರ್ಪಡಿಸಲಾಗಿದೆ. ಶೈಕ್ಷಣಿಕ ಹಾಗೂ ಸಾಮಾಜಿಕ ಉದ್ದೇಶಕ್ಕೆ ಎಂದು ಬದಲಾಯಿಸಿ ಜಮೀನಿನ ಮೌಲ್ಯ ಪರಿಷ್ಕರಿಸಲು ನಿರ್ಣಯ.
- ಬಾಗಲಕೋಟೆ ಜಿಲ್ಲೆ ಶೀಗಿಕೇರಿ ಗ್ರಾಮದಲ್ಲಿ 5 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಮುಧೋಳದ ಪರಿವರ್ತನ ಸಾಮಾಜಿಕ ಸೇವಾ ಸಂಘಕ್ಕೆ ರಿಯಾಯಿತಿ ದರದಲ್ಲಿ ನೀಡಲು ಒಪ್ಪಿಗೆ.
- ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ತಾಲೂಕು ಮಾರ್ಪಾಡಿ ಗ್ರಾಮದ 0.25 ಎಕರೆ (25 ಸೆಂಟ್) ಜಮೀನನ್ನು ಪ್ರೇರಣಾ ಸೇವಾ ಟ್ರಸ್ಟ್ಗೆ ಸೇವಾ ಕೇಂದ್ರ ನಿರ್ವಿುಸಲು ಮಂಜೂರು.
- ವಿಜಯಪುರದ ಹಿರೇಮಠ ಶ್ರೀ ಸಿದ್ದಲಿಂಗೇಶ್ವರ ವಿದ್ಯಾ ಅಭಿವೃದ್ಧಿ ಟ್ರಸ್ಟ್ಗೆ ತಿಕೋಟ ತಾಲೂಕಿನ ನವರಸಪೂರ ಗ್ರಾಮದಲ್ಲಿ 5 ಎಕರೆ ಜಮೀನನ್ನು ಯೋಗ ಕೇಂದ್ರ, ಗೋಶಾಲೆ, ಆಶ್ರಮ ಮತ್ತು ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಮಂಜೂರು.
- ಕರ್ನಾಟಕ ಮೋಟಾರು ವಾಹನ ತೆರಿಗೆ ನಿರ್ಧರಣೆ (2ನೇ ತಿದ್ದುಪಡಿ) ವಿಧೇಯಕ, 2020ಕ್ಕೆ ಘಟನೋತ್ತರ ಅನುಮೋದನೆ ನೀಡ ಲಾಗಿದೆ. ಕೊಯಿಲು ಯಂತ್ರಗಳಿಗೆ ತೆರಿಗೆ ಕಡಿತ ಮಾಡುವ ತೀರ್ಮಾನ ಮಾಡಿದ್ದು, ಈಗ ಒಪ್ಪಿಗೆ ಪಡೆದುಕೊಳ್ಳಲಾಗಿದೆ.
- ಮೈಸೂರು ನಗರದಲ್ಲಿ ನಿರ್ವಣವಾಗುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ 2ನೇ ಹಂತದಲ್ಲಿ ಒಳಾಂಗಣ ಮತ್ತು ಅಪೂರ್ಣಗೊಂಡಿರುವ ಕೆಲಸ ಪೂರ್ಣಗೊಳಿಸಲು 16.50 ಕೋಟಿ ರೂ.ಗೆ ಆಡಳಿತಾತ್ಮಕ ಅನುಮತಿ ನೀಡಲಾಗಿದೆ. ಒಟ್ಟು ಎರಡು ಸಾವಿರ ಆಸನ ವ್ಯವಸ್ಥೆಯ ಎಸಿ ಸಭಾಂಗಣ ಇದಾಗಿದೆ.
- ಮೈಸೂರು ಜೆಪಿ ನಗರದಲ್ಲಿ ಸಿಎ ಸೈಟನ್ನು ಸಿದ್ದಲಿಂಗೇಶ್ವರಸ್ವಾಮಿ ಟ್ರಸ್ಟ್ಗೆ ದೇವಾಲಯ ನಿರ್ಮಾಣ ಮಾಡಲು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಹಂಚಿಕೆೆ.
- ದಾವಣಗೆರೆ ದೇವಾಂಗ ಸಂಘದವರು ಕುಂದವಾಡದಲ್ಲಿ ಖಾಸಗಿ ಬಡಾವಣೆಯಲ್ಲಿನ ನಾಗರಿಕ ಸೌಲಭ್ಯ ಉದ್ದೇಶಕ್ಕೆ ಕಾಯ್ದಿರಿಸಿದ್ದ ನಿವೇಶನ ಹಂಚಿಕೆ ಮಾಡಿದ್ದು, 67 ಲಕ್ಷ ರೂ. ಕಟ್ಟಬೇಕಿತ್ತು, ಅವರು 6.09 ಲಕ್ಷ ರೂ. ಕಟ್ಟಿದ್ದು, ಅದನ್ನೂ ಸೇರಿಕೊಂಡಂತೆ ದರವನ್ನು ಶೇ.50 ಕಡಿತ ಮಾಡಿ ಮಂಜೂರು.
- ತುಮಕೂರು ಜಿಲ್ಲೆ ಬೆಳ್ಳಾವಿ, ಕೋರ, ಕಳ್ಳಂಬೆಳ್ಳ ಭಾಗದ 70 ಕೆರೆಗೆ ನೀರು ತುಂಬಲು 250 ಕೋಟಿ ರೂ. ಯೋಜನೆಗೆ ಸಂಪುಟದ ಅನುಮೋದನೆ.