ಜಿನೇವಾ/ನವದೆಹಲಿ: ಲಸಿಕೆಗೆ ಪ್ರತಿರೋಧ ಒಡ್ಡುವ ಕರೊನಾ ವೈರಸ್ನ ಹೊಸ ರೂಪಾಂತರಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ‘ಮೂ’ ಎಂದು ನಾಮಕರಣ ಮಾಡಿದ್ದು, ಈ ಪ್ರಭೇದದ ಮೇಲೆ ಕಣ್ಣಿಟ್ಟಿರುವುದಾಗಿ ತಿಳಿಸಿದೆ. ಈ ಪ್ರಭೇದದ ಕುರಿತು ಇನ್ನಷ್ಟು ಅಧ್ಯಯನ ನಡೆಸಬೇಕಿದೆ ಎಂದು ಅದು ಬುಧವಾರ ಹೇಳಿದೆ. ಮೂ ಪ್ರಭೇದ ಕೊಲಂಬಿಯಾದಲ್ಲಿ ಮೊದಲ ಬಾರಿಗೆ ಈ ವರ್ಷ ಜನವರಿಯಲ್ಲಿ ಪತ್ತೆಯಾಗಿತ್ತು.
‘ಮೂ ರೂಪಾಂತರಿಯಲ್ಲಿ ಹಲವು ಪ್ರಭೇದಗಳ ಸಮೂಹವಿದ್ದು ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಂಭಾವ್ಯ ಲಕ್ಷಣ ಹೊಂದಿದೆ’ ಎಂದು ಡಬ್ಲ್ಯುಎಚ್ಒ ತಿಳಿಸಿದೆ. ಜಗತ್ತಿನಾದ್ಯಂತ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಹೊಸ ಪ್ರಭೇದ ಕಾಣಿಸಿಕೊಂಡಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಪ್ರಸ್ತುತ ಆಲ್ಪಾ, ಬೀಟಾ, ಗಾಮಾ ಮತ್ತು ಡೆಲ್ಟಾ ಪ್ರಭೇದಗಳಿದ್ದು ಐದನೆಯದಾಗಿ ‘ಮೂ’ ಸೇರ್ಪಡೆಗೊಂಡಿದೆ. ಮೂ ಪ್ರಭೇದ ಭಾರತದಲ್ಲಿ ಇದುವರೆಗೆ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೊಸ ಕೇಸ್ನಲ್ಲಿ ಶೇ. 35.6 ಏರಿಕೆ
ಭಾರತದಲ್ಲಿ ಬುಧವಾರ ಕರೊನಾ ವೈರಸ್ನ 41,965 ಹೊಸ ಕೇಸ್ಗಳು ದೃಢಪಟ್ಟಿವೆ. ಇದು ಮಂಗಳವಾರ ದಾಖಲಾದ 30,941ಕ್ಕಿಂತ ಶೇಕಡ 35.6ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 460 ಜನರು ಮೃತಪಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವುದು ಮೂರನೇ ಅಲೆಯ ಸೂಚನೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ವಿಷಕಾರಿ ಹಾವಿನಲ್ಲಿ ಕರೊನಾ ಔಷಧ!
ಬ್ರೆಜಿಲ್ನ ಒಂದು ಬಗೆಯ ಹಾವಿನ ವಿಷದಲ್ಲಿ ಕರೊನಾ ಚಿಕಿತ್ಸೆಗೆ ಔಷಧ ತಯಾರಿಸುವಂಥ ಅಂಶವಿದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ‘ಮಾಲೆಕ್ಯೂಲ್ಸ್’ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಟವಾಗಿದೆ. ಜರಾರಕುಸು ಪಿಟ್ ವೈಪರ್ ಸರೀಸೃಪ ಉತ್ಪಾದಿಸುವ ಕಣ ಮಂಕಿ ಸೆಲ್ ಔಷಧ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧನೆ ತಿಳಿಸಿದೆ.
ಕೇರಳದಲ್ಲಿ ಲಾಕ್ಡೌನ್?
ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕುವ ಕಟ್ಟುನಿಟ್ಟಿನ ಲಾಕ್ಡೌನ್ ಹಾಗೂ ಕಂಟೇನ್ಮೆಂಟ್ ಕ್ರಮಗಳೇ ಹೆಚ್ಚು ಪರಿಣಾಮಕಾರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಭಿಪ್ರಾಯ ಪಟ್ಟಿದೆ. ಇದರ ಹೊರತಾಗಿ ಬೇರೆ ದಾರಿಯೇ ಇಲ್ಲ. ಹಾಗೆ ಮಾಡಿದರೆ ಮಾತ್ರವೇ ರಾಜ್ಯದಲ್ಲಿ ಸೆಪ್ಟೆಂಬರ್ ಮಧ್ಯದ ವೇಳೆಗೆ ಸೋಂಕಿನ ಪ್ರಕರಣಗಳು ಕಡಿಮೆಯಾಗಬಹುದು ಎಂದು ಮೂಲಗಳು ಹೇಳಿವೆ.
ಗೂಗಲ್ನಿಂದ ಕನ್ನಡದಲ್ಲಿ ಲಸಿಕೆ ಮಾಹಿತಿ
ಭಾರತದಾದ್ಯಂತ 13,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೋವಿಡ್ ಲಸಿಕೆಯ ಲಭ್ಯತೆ ಹಾಗೂ ಸಮಯ ನಿಗದಿ ಕುರಿತು ಕನ್ನಡ ಸಹಿತ ಎಂಟು ಭಾರತೀಯ ಭಾಷೆಗಳಲ್ಲಿ ಮಾಹಿತಿ ತಿಳಿಯಲು ಗೂಗಲ್ ಸರ್ಚ್, ಮ್ಯಾಪ್ಸ್ ಮತ್ತು ಅಸಿಸ್ಟೆಂಟ್ ವೇದಿಕೆಗಳಲ್ಲಿ ಅನುಕೂಲ ಕಲ್ಪಿಸಿದೆ. ಈ ವಾರವೇ ಇದು ಸೇವೆ ಆರಂಭಿಸಲಿದೆ. ಕೋವಿನ್ ಎಪಿಐಗಳ ರಿಯಲ್ ಟೈಮ್ ಡೇಟಾ ಆಧಾರದಲ್ಲಿ ಮಾಹಿತಿಗಳನ್ನು ಒದಗಿಸಲಾಗುವುದೆಂದು ಗೂಗಲ್ ಬುಧವಾರ ತಿಳಿಸಿದೆ.
ಲಭ್ಯವಾಗುವ ಮಾಹಿತಿಗಳು: ಪ್ರತಿ ಕೇಂದ್ರದಲ್ಲಿನ ಸ್ಲಾಟ್, ಲಭ್ಯವಿರುವ ಲಸಿಕೆ (ಕೊವ್ಯಾಕ್ಸಿನ್, ಕೋವಿಶೀಲ್ಡ್ ಇತ್ಯಾದಿ), ಎಷ್ಟನೇ ಡೋಸ್, ಬೆಲೆ (ಪಾವತಿಯೇ ಉಚಿತವೇ?) ಇತ್ಯಾದಿ. ಕನ್ನಡ, ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲಿ ಮಾಹಿತಿ ಲಭ್ಯ ಇರಲಿದೆ.