ನ್ಯೂಸ್

ಏಡ್ಸ್ ತಡೆಗೆ ಒಗ್ಗಟ್ಟಿನ ಯತ್ನ

|ಬೇಲೂರು ಹರೀಶ ಬೆಂಗಳೂರು

ಏಡ್ಸ್ ರೋಗದ ಹೆಸರು ಕೇಳಿದರೇ ಜನರು ಬೆಚ್ಚುತ್ತಿದ್ದ ಕಾಲವೊಂದಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಾಗೃತಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಎಚ್​ಐವಿ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಕಳೆದ ವರ್ಷ ದೇಶದ ಸೋಂಕಿತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ವರ್ಷ 16ನೇ ಸ್ಥಾನಕ್ಕೆ (ಶೇ.0.22) ಇಳಿದಿದೆ. ನಾಗಾಲ್ಯಾಂಡ್ (ಶೇ.1.66) ಪ್ರಥಮ ಸ್ಥಾನದಲ್ಲಿದೆ.

ಮಿಜೋರಾಂನಲ್ಲಿ ಶೇ.0.91, ತ್ರಿಪುರದಲ್ಲಿ ಶೇ.0.63, ಮಣಿಪುರದಲ್ಲಿ ಶೇ.0.51, ಮೇಘಾಲಯದಲ್ಲಿ ಶೇ.0.45 ಹಾಗೂ ಗುಜರಾತ್​ನಲ್ಲಿ ಶೇ.0.39 ಸೋಂಕಿತರಿದ್ದು, ಕ್ರಮವಾಗಿ 2, 3, 4, 5 ಮತ್ತು 6ನೇ ಸ್ಥಾನದಲ್ಲಿವೆ.

ಕರ್ನಾಟಕದಲ್ಲಿ ಸದ್ಯ 1,67, 872 ಸೋಂಕಿತರಿದ್ದಾರೆ. 2020-21ರ ಅಕ್ಟೋಬರ್​ವರೆಗೆ 6,96,159 ಜನರನ್ನು ಎಚ್​ಐವಿ ಪರೀಕ್ಷೆಗೆ ಒಳಪಡಿಸಿದ್ದು, 4,682 ಜನರಲ್ಲಿ ಸೋಂಕು ಪತ್ತೆಯಾಗಿದೆ. 6,36,665 ಗರ್ಭಿಣಿಯರು ಪರೀಕ್ಷೆಗೆ ಒಳಪಟ್ಟಿದ್ದು, 313 ಮಂದಿಗೆ ಎಚ್​ಐವಿ ಸೋಂಕು ಪತ್ತೆಯಾಗಿದೆ. ಈವರೆಗೆ ಒಟ್ಟು 80,693 ಸೋಂಕಿತರು ಸಾವನ್ನಪ್ಪಿದ್ದಾರೆ.

ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ(ಕೆಸಾಪ್ಸ್) ಎಚ್​ಐವಿ ಸೋಂಕು ತಡೆಗಟ್ಟಲು ಜನರಿಗೆ ಅರಿವು ಹಾಗೂ ಸಾಮಾಜಿಕ ಸೌಲಭ್ಯ ಒದಗಿಸಲು ಹಲವು ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದೆ. ಸೋಂಕಿತ ಸಮುದಾಯಕ್ಕೆ ಸರ್ಕಾರದ ಸೇವೆಗಳ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಏಡ್ಸ್ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಿಸುತ್ತದೆ. ‘ಎಚ್​ಐವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು, ಜವಾಬ್ದಾರಿಯ ಹಂಚಿಕೆ’ ಎಂಬುದು ಈ ಸಲದ ಘೋಷವಾಕ್ಯ.

5 ಜಿಲ್ಲೆಯಲ್ಲಿ ಹೆಚ್ಚು: ದೇವದಾಸಿ ಪದ್ಧತಿ ಇರುವ ರಾಜ್ಯದ ವಿಜಯಪುರ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚು ಎಚ್​ಐವಿಸೋಂಕಿತರು ಪತ್ತೆಯಾಗುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಎಚ್​ಐವಿ ಸೋಂಕು ಹೆಚ್ಚಿರುವ 4 ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಹಯೋಗದಲ್ಲಿ ರಾಜ್ಯವು 1998ರಿಂದ ಸಮೀಕ್ಷೆ ನಡೆಸುತ್ತಿದೆ. ಪ್ರಮುಖವಾಗಿ ಗರ್ಭಿಣಿಯರಲ್ಲಿ ಸೋಂಕು ಇಳಿಕೆಯಾಗಿದೆ. 14 ರಿಂದ 40 ವಯಸ್ಸಿನ ಜನರಲ್ಲಿ ಹೆಚ್ಚಿನ ಸೋಂಕು ಪತ್ತೆಯಾಗುತ್ತಿದೆ.

ಆರೈಕೆ ಕೇಂದ್ರಗಳು: ರಾಜ್ಯದಲ್ಲಿ ಒಟ್ಟು 3,335 ಆಪ್ತ ಸಮಾಲೋಚನಾ ಹಾಗೂ ಪರೀಕ್ಷಾ ಕೇಂದ್ರಗಳು ಕಾರ್ಯನಿವಹಿಸುತ್ತಿವೆ. 68 ಆಂಟಿ ರೆಟ್ರೋವೈರಲ್ ಥೆರಪಿ ಕೇಂದ್ರ ಹಾಗೂ 311 ಲಿಂಕ್ ಆಂಟಿ ರೆಟ್ರೋವೈರಲ್ ಥೆರಪಿ ಕೇಂದ್ರಗಳಿವೆ. ಈವರೆಗೆ 3,51,182 ಮಂದಿ ಆಂಟಿ ರೆಟ್ರೋವೈರಲ್ ಥೆರಪಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.1,67,872 ಮಂದಿ ಎಆರ್​ಟಿ ಔಷಧ ತೆಗೆದುಕೊಳ್ಳುತ್ತಿದ್ದಾರೆ.

ಸುರಕ್ಷಾ ಕ್ಲಿನಿಕ್: ರಾಜ್ಯದಲ್ಲಿ ಪ್ರಸ್ತುತ 54 ಡಿಎಸ್​ಆರ್​ಸಿ ಕ್ಲಿನಿಕ್​ಗಳಿದ್ದು, ಜಿಲ್ಲಾ, ತಾಲೂಕು ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಿಗೆ ‘ಸುರಕ್ಷಾ ಕ್ಲಿನಿಕ್’ ಎಂದು ಹೆಸರಿಡಲಾಗಿದೆ. ಈ ಕ್ಲಿನಿಕ್​ಗಳಲ್ಲಿ ರೋಗಲಕ್ಷಣಗಳಿಗೆ ಅನುಗುಣವಾಗಿ ವಿವಿಧ ಏಳು ಬಣ್ಣಗಳ ಪ್ಯಾಕೆಟ್​ಗಳಲ್ಲಿ ಎಸ್​ಟಿಐ ಹಾಗೂ ಆರ್​ಟಿಐ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಕೇಂದ್ರದ ಯೋಜನೆ: ಎಚ್​ಐವಿ/ಏಡ್ಸ್ ತಡೆಯಲು ಕೇಂದ್ರ ಸರ್ಕಾರ 1992ರಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ)ಯನ್ನು ಸ್ಥಾಪಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಕಾರ್ಯನಿರ್ವಹಿಸುವ ನ್ಯಾಕೊ, 35 ಸೊಸೈಟಿಗಳ ಮೂಲಕ ದೇಶಾದ್ಯಂತ ಸೇವೆ ಒದಗಿಸುತ್ತದೆ. ಜತೆಗೆ ಏಡ್ಸ್ ತಡೆ ಮತ್ತು ನಿಯಂತ್ರಣಕ್ಕೆ ನೀತಿ ನಿರೂಪಿಸಿ ಜಾರಿ ಮಾಡುವ ನೋಡಲ್ ಸಂಸ್ಥೆಯೂ ಇದಾಗಿದೆ.

ಸೋಂಕಿತರಿಗೆ ರಾಜ್ಯದ ಯೋಜನೆ

  • ಆಹಾರ ಇಲಾಖೆಯಲ್ಲಿ ಅಂತ್ಯೋದಯ ಕಾರ್ಡ್ ಪಡೆಯಲು ಅವಕಾಶವಿದ್ದು, ಪ್ರತಿ ತಿಂಗಳು 35 ಕೆಜಿ ಅಕ್ಕಿ ಸಿಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚೇತನ ಯೋಜನೆಯಡಿ ಲೈಂಗಿಕ ಕಾರ್ಯಕರ್ತರಿಗೆ ಸಣ್ಣ ಉದ್ದಿಮೆ ಆರಂಭಿಸಲು 50 ಸಾವಿರ ರೂ. ಸಾಲ ನೀಡುತ್ತದೆ. ಇದರಲ್ಲಿ 25 ಸಾವಿರ ರೂ. ಸಬ್ಸಿಡಿ.
  • ಎಚ್​ಐವಿ ಸೋಂಕಿತ ಮಹಿಳೆಯರಿಗೆ ‘ಧನಶ್ರೀ’ ಯೋಜನೆಯಡಿ 50 ಸಾವಿರ ರೂ. ಸಾಲ. ಇದರಲ್ಲಿ 25 ಸಾವಿರ ರೂ. ಸಬ್ಸಿಡಿ. ವಿಶೇಷ ಪಾಲನಾ ಯೋಜನೆಯಲ್ಲಿ ಸೋಂಕಿತ ಹಾಗೂ ಬಾಧಿತ ಮಕ್ಕಳಿಗೆ (ಪಾಲಕರು ಇಲ್ಲದವರಿಗೆ) 750 ರೂ. ಹಾಗೂ ಪಾಲಕರು ಇರುವವರಿಗೆ 650 ರೂ. ಸಿಗಲಿದೆ.
  • ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ 500 ರೂ. ಪಿಂಚಣಿ. ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ನಿಗಮದಲ್ಲಿ ಮನೆ ಸೌಲಭ್ಯ ಸಿಗುತ್ತದೆ.
  • ಆರೋಗ್ಯ ಇಲಾಖೆಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಪ್ರಯಾಣ ಭತ್ಯೆ, ಪ್ರಾಥಮಿಕ ಶಿಕ್ಷಣ ಇಲಾಖೆ ಹಾಗೂ ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಸಗಿ ಶಾಲೆಯಲ್ಲಿ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಉಚಿತ ಕಾನೂನು ಸೇವೆ

ನ್ಯಾಕೋ ಜಾಗೃತಿ ಹೇಗೆ

  • ಎಚ್​ಐವಿ ಸೋಂಕು/ಏಡ್ಸ್ ರೋಗದ ಬಗ್ಗೆ ಮಾಹಿತಿ, ಶಿಕ್ಷಣ, ಸಂವಹನದ ಮೂಲಕ ಜಾಗೃತಿ ಮೂಡಿಸುವುದು. ಲೈಂಗಿಕ ಕಾರ್ಯಕರ್ತೆಯರು, ಸಲಿಂಗಕಾಮಿಗಳು, ತೃತೀಯ ಲಿಂಗಿಗಳು, ಕೈದಿಗಳು ಹೆಚ್ಚು ಜಾಗೃತರಾಗಿರುವಂತೆ ತಿಳಿಸುವುದು.
  • ಕೌನ್ಸೆಲಿಂಗ್, ನಿಯಮಿತವಾಗಿ ಎಚ್​ಐವಿ ಪರೀಕ್ಷೆ, ಎಚ್​ಆರ್​ಜಿ ಮೂಲಕ ಉಚಿತ ಕಾಂಡಂ ವಿತರಣೆ.
  • ಎಚ್​ಐವಿ, ಮಲೇರಿಯಾ ಇನ್ನಿತರ ಸೋಂಕುಮುಕ್ತ ಸುರಕ್ಷಿತ ರಕ್ತ ವಿತರಣೆಗೆ ಕ್ರಮ. ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಆಯೋಜನೆ.
  • ಎಚ್​ಐವಿ ಪೀಡಿತರಿಗೆ ಎಆರ್​ಟಿ ಚಿಕಿತ್ಸೆ, ಕೌನ್ಸೆಲಿಂಗ್, ಸಾಮಾಜಿಕವಾಗಿ ಸಕ್ರಿಯವಾಗಿರುವಂತೆ ಮಾಡುವುದು.
  • ಎನ್​ಜಿಒ ಮತ್ತು ಸಂಘ ಸಂಸ್ಥೆಗಳ ಜತೆಗೂಡಿ ಸಮುದಾಯ ಕಾರ್ಯಕ್ರಮ ಆಯೋಜನೆ.

ರಾಜ್ಯದಲ್ಲಿ ಸೋಂಕಿತರು ಹಾಗೂ ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಪ್ರಯ್ನತಿಸಲಾಗುತ್ತಿದೆ. ಏಡ್ಸ್​ನಿಂದ ಉಂಟಾಗುವ ಕಳಂಕ ಹಾಗೂ ತಾರತಮ್ಯ ನಿವಾರಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. | ಡಾ.ಸಂಜಯ್ ಬಿ.ಪಾಟೀಲ್  ಜಂಟಿ ನಿರ್ದೇಶಕರು ಕೆಸಾಪ್ಸ್