ಮೆಕ್ಸಿಕೊ: ನಗರದ ಚರಂಡಿ ವ್ಯವಸ್ಥೆಯನ್ನು ಶುಚಿಗೊಳಿಸುತ್ತಿದ್ದ ಮೆಕ್ಸಿಕೊ ನಗರದ ಪೌರ ಕಾರ್ಮಿಕರು ಚರಂಡಿಯಲ್ಲಿ ಪತ್ತೆಯಾದ ದೈತ್ಯ ಇಲಿಯನ್ನು ನೋಡಿ ಅಕ್ಷರಶಃ ಅಚ್ಚರಿಗೀಡಾದ ಅಪರೂಪದ ಘಟನೆ ನಡೆದಿದೆ. ಪತ್ತೆಯಾದ ಇಲಿಯ ಮುಂದೆ ಪೌರ ಕಾರ್ಮಿಕರೇ ಕುಬ್ಜರಂತೆ ಕಾಣುತ್ತಿದ್ದಿದ್ದು ವಿಚಿತ್ರವೇ ಸರಿ.
ಅಂದಹಾಗೆ ಪೌರ ಕಾರ್ಮಿಕರು ಮೆಕ್ಸಿಕೊ ನಗರದ ಒಳಚರಂಡಿಯ ಸುರಂಗಗಳಿಂದ ಸುಮಾರು 22 ಟನ್ ಕಸದ ರಾಶಿಯನ್ನು ಹೊರ ತೆಗೆಯಲು ಹರಸಾಹಸ ಪಟ್ಟರು. ಇದೇ ವೇಳೆ ಇಲಿಯು ಪತ್ತೆಯಾಗಿದೆ. ಆದರೆ, ನೀವಂದುಕೊಂಡಂತೆ ಅದು ನಿಜವಾದ ಇಲಿಯಲ್ಲ. ಬದಲಾಗಿ ಕುಳಿತಿರುವ ಸ್ಥಿತಿಯಲ್ಲಿ ತಯಾರಿಸಿರುವಂತಹ ನೈಜವಾದ ಕಲಾಕೃತಿಯಾಗಿದೆ.
ಇಲಿಯು ಸೃಜನಾತ್ಮಕ ಹ್ಯಾಲೋವಿನ್ ಕ್ರಾಪ್ (ಥಿಯಟ್ರಿಕಲ್ ಪ್ರಾಪರ್ಟಿ) ಆಗಿದ್ದು, ಅದನ್ನು ಗೋದಾಮು ಒಂದರಲ್ಲಿ ಇಡಲಾಗಿತ್ತು. ಮೆಕ್ಸಿಕೊದಲ್ಲಿ ಸಂಭವಿಸಿದ ಭಾರಿ ಬಿರುಗಾಳಿಯ ವೇಳೆ ಇಲಿಯ ಕಲಾಕೃತಿಯು ಹಾರಿಹೋಗಿ ಚರಂಡಿಗೆ ಸಿಲುಕಿತ್ತು. ಆದರೆ, ಕಲಾಕೃತಿ ಎಲ್ಲಿ ಹೋಯಿತು ಎಂಬುದರ ಅರಿವು ಮಾಲೀಕರಿಗೆ ಇರಲಿಲ್ಲ. ಆದರೆ, ಚರಂಡಿಯಲ್ಲಿ ವರ್ಷಗಳ ವರೆಗೆ ಸಿಲುಕಿದ್ದ ಕಲಾಕೃತಿ ಕೊನೆಯೂ ಪತ್ತೆಯಾಯಿತು.
ಇನ್ನು ಕಲಾಕೃತಿ ನೋಡಿದ ಅನೇಕ ಮಂದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ರಸ್ತೆಯಲ್ಲಿ ನಡೆದು ಹೋಗುವಾಗ ಹೆಗ್ಗಣಗಳನ್ನು ನೋಡಿದರೆ ಹೆದರಿ ಓಡುವುದನ್ನು ನೋಡಿದ್ದೇವೆ. ಒಂದು ವೇಳೆ ಕಲಾಕೃತಿಯೇನಾದರೂ ಮಾರ್ಗ ಮಧ್ಯೆ ಇಟ್ಟರೆ ಮೂರ್ಛೆ ತಪ್ಪುವುದಂತೂ ಖಂಡಿತ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಇಲಿಯ ಕಲಾಕೃತಿಯು ನನ್ನದೇ ಎಂದು ಎವಿಲಿನ್ ಲೋಪೇಜ್ ಎಂಬ ಮಹಿಳೆಯೊಬ್ಬರು ಮುಂದೆ ಬಂದಿದ್ದಾರೆ. ಹ್ಯಾಲೋವಿನ್ ( ಪ್ರತಿ ವರ್ಷ ಅಕ್ಟೋಬರ್ 31ರಂದು ನಡೆಯುವ ಪಾಶ್ಚಾತ್ಯ ಕ್ರಿಶ್ಚಿಯನ್ ಹಬ್ಬ) ಗಾಗಿ ಇಲಿ ಕಲಾಕೃತಿ ತಯಾರಿಸಲು ವಸ್ತುಗಳನ್ನು ಹುಡುಕುತ್ತಿದ್ದೆ. ಆದರೆ, ಹಲವು ವರ್ಷಗಳ ಹಿಂದೆ ಭಾರಿ ಮಳೆಯಲ್ಲಿ ಕೊಚ್ಚಿ ಹೊಗಿತ್ತು ಮಾಲೀಕಳು ಹೇಳಿದ್ದಾರೆ.
ಈ ಮೊದಲೇ ಒಳಚರಂಡಿಯಲ್ಲಿ ಹುಡುಕಲು ನೆರವು ಕೇಳಿದ್ದರಂತೆ ಆದರೆ, ಯಾರೊಬ್ಬರು ಮುಂದೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದೀಗ ತಮ್ಮ ಇಲಿಯ ಕಲಾಕೃತಿಯನ್ನು ಮರಳಿ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)