ಸಿದ್ದಾಪುರ: ಶಿರಸಿ ತಾಲೂಕಿನಲ್ಲಿ ಒಂದು ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ. ಸಿದ್ದಾಪುರ ತಾಲೂಕು ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದೆ ಮಂಗನ ಕಾಯಿಲೆ ಬಾಧಿಸಿದ ಸ್ಥಳಗಳಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಈ ಬಾರಿ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗದಂತೆ ತಾಲೂಕಿನ ಎಲ್ಲ ಇಲಾಖೆಗಳು ಟೀಮ್ ವರ್ಕ್ ಆಗಿ ಕೆಲಸ ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಸಿದ್ದಾಪುರ ಕೆಎಫ್ಡಿ ಮುಕ್ತ ತಾಲೂಕಾಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಆಡಳಿತ ಸೌಧದಲ್ಲಿ ಮಂಗನ ಕಾಯಿಲೆ ತಡೆಗಟ್ಟುವ ಕುರಿತು ಗುರುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಐದಾರು ವರ್ಷಗಳಿಂದ ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಬಾಧಿಸುತ್ತಿರುವ ಮಂಗನ ಕಾಯಿಲೆಗೆ ಸಂಬಂಧಿಸಿದ ಪ್ರಯೋಗಾಲಯವನ್ನು ಶಿರಸಿಯಲ್ಲಿ ಒಂದೆರಡು ವಾರದೊಳಗೆ ಪ್ರಾರಂಭಿಸಲಾಗುವುದು. ಶಿರಸಿಯಲ್ಲಿ ಲ್ಯಾಬ್ ಪ್ರಾರಂಭಿಸುವ ಸಲುವಾಗಿ ಹಣ ಬಿಡುಗಡೆಯಾಗಿದ್ದು, ಎಜೆನ್ಸಿ ನಿಯೋಜನೆ ಮಾಡಿ ವಾರದೊಳಗೆ ಕೆಎಫ್ಡಿ ಪ್ರಯೋಗಾಲಯ ಪ್ರಾರಂಭಿಸಲಾಗುತ್ತದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಅವರು ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.
ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಕೆಎಫ್ಡಿ ನೋಡೆಲ್ ಅಧಿಕಾರಿ ಡಾ. ಸತೀಶ, ಎಸಿಎಫ್ ಪವಿತ್ರಾ ಯು.ಜೆ., ಸಿಪಿಐ ಜೆ.ಬಿ.ಸೀತಾರಾಮ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳಿದ್ದರು.