ಮೂಡುಗೊಪ್ಪ ನಗರ ಗ್ರಾಪಂ ಕಚೇರಿಯಲ್ಲಿ ಬಂಟರ ಯಾನೆ ನಾಡವರ ಸಂಘದಿಂದ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ಶೆಟ್ಟಿ, ನಾಗರಾಜ ಶೆಟ್ಟಿ, ಕರುಣಾಕರ ಶೆಟ್ಟಿ, ಮಾಲಾಶ್ರೀ ಶೆಟ್ಟಿ, ರಶ್ಮಿ ಶೆಟ್ಟಿ ಇತರರಿದ್ದರು.  
ನ್ಯೂಸ್

ಬಂಟ ಸಮುದಾಯದ ಸಂಘಟನೆಗೆ ಶ್ರಮಿಸಿ

ಹೊಸನಗರ: ಸಂಘಟನೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಬಂಟ ಸಮುದಾಯ ಸಂಘಟನೆಗೆ ಒಳಗೊಳ್ಳಬೇಕಿದೆ ಎಂದು ನಗರ ಘಟಕ ಬಂಟರ ಯಾನೆ ನಾಡವರ ಸಂಘದ ನೂತನ ಗೌರವಾಧ್ಯಕ್ಷ ಚಂದ್ರಶೇಖರ ಶೆಟ್ಟಿ ದೇವಗಂಗೆ ಹೇಳಿದರು.

ಮೂಡುಗೊಪ್ಪ ನಗರ ಗ್ರಾಪಂ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಂಟರ ಸಮ್ಮಿಲನ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಸಂಘ ನಡೆಸುವುದು ಸುಲಭವಲ್ಲ, ಆರ್ಥಿಕ ಕ್ರೋಡೀಕರಣದ ಜತೆಗೆ ಸಮುದಾಯದ ಹಿತಕ್ಕಾಗಿ ಸಮಯ ಮೀಸಲಿಡಬೇಕು. ಯುವಕರು ಹೆಚ್ಚಾಗಿ ಸಂಘಟನೆಯಲ್ಲಿ ಭಾಗಿಯಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊಸನಗರ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ತಾಲೂಕಿನಾದ್ಯಂತ ಸಂಚರಿಸಿ ಸಮಾಜ ಸಂಘಟನೆ ಮಾಡಲಾಗುತ್ತಿದೆ. ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಯಕ್ಷಗಾನ ಕಲಾವಿದ ಪ್ರಕಾಶನಗರ ಜಗನ್ನಾಥ ಶೆಟ್ಟಿ, ಸತೀಶ ಶೆಟ್ಟಿ, ಭಾಗವತ ಅಣ್ಣಪ್ಪ ಶೆಟ್ಟಿ ಮುಂಡುಕೋಡು ದಂಪತಿಯನ್ನು ಸನ್ಮಾನಿಸಲಾಯಿತು. ಕು.ಇಂಪನಾ ಯಕ್ಷನೃತ್ಯ ಮತ್ತು ರಿಂಗ್ ಡಾನ್ಸ್ ಗಮನ ಸೆಳೆಯಿತು. 100 ಜನ ಕೌರವರ ಹೆಸರನ್ನು ಹಿತಾ ಪಠಿಸಿದಳು. ಧನ್ಯಾ ಮತ್ತು ಸಂಗಡಿಗರು ನೃತ್ಯ ಮಾಡಿದರು.

ಬಂಟ ಸಮಾಜದ ಉಪಾಧ್ಯಕ್ಷ ನಗರ ಚಂದ್ರಶೇಖರ ಶೆಟ್ಟಿ, ತಾಲೂಕು ಕಾರ್ಯದರ್ಶಿ ನಾಗರಾಜ ಶೆಟ್ಟಿ, ಗ್ರಾಪಂ ಸದಸ್ಯ ಕರುಣಾಕರ ಶೆಟ್ಟಿ, ರಿಪ್ಪನ್‌ಪೇಟೆ ಅಧ್ಯಕ್ಷ ವಿಜಯಕುಮಾರ ಶೆಟ್ಟಿ, ಬಟ್ಟೆಮಲ್ಲಪ್ಪ ವಲಯ ಅಧ್ಯಕ್ಷ ನಾಗರಾಜ ಶೆಟ್ಟಿ, ನಗರ ವಲಯ ಘಟಕದ ಅಧ್ಯಕ್ಷ ಗೋಪಾಲ ಶೆಟ್ಟಿ, ಪ್ರಮುಖರಾದ ಗಿರಿಜಮ್ಮ, ಶಿವರಾಮ ಶೆಟ್ಟಿ, ಮೋಹನ ಶೆಟ್ಟಿ, ಮಧುಕರ ಶೆಟ್ಟಿ, ಶ್ರೀಧರ ಶೆಟ್ಟಿ, ಮಾಲಾಶ್ರೀ ಶೆಟ್ಟಿ, ರಶ್ಮಿ ಶೆಟ್ಟಿ, ಸಾನಿಕಾ ಶೆಟ್ಟಿ ಇತರರಿದ್ದರು.