ನ್ಯೂಸ್

ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಪರಿಣಾಮಕಾರಿಯಾಗಿ ಕೆಲಸ: ಸಿಎಂ ಸಿದ್ದರಾಮಯ್ಯ ಸಲಹೆ | Commitment towards people

ಬೆಂಗಳೂರು: ಕಾರ್ಯತತ್ಪರತೆ ವೃದ್ಧಿಸಿಕೊಂಡು ಅಭಿವೃದ್ಧಿಗೆ ವೇಗ, ಜನರ ಆರ್ಥಿಕ ಶಕ್ತಿ ಹೆಚ್ಚಿಸುವುದು ಹೊಸ ವರ್ಷದ ಸಂಕಲ್ಪವಾಗಬೇಕು ಎಂದು ಐಎಎಸ್, ಐಪಿಎಸ್, ಐಎ್ಎಸ್ ಹಾಗೂ ಐಆರ್‌ಎಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಹಿರಿಯ ಅಧಿಕಾರಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿ ಮಾತನಾಡಿದ ಅವರು, ಪ್ರಾದೇಶಿಕ ಅಸಮತೋಲನ, ಅಸಮಾನತೆ ನಿವಾರಣೆಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.

ಬದುಕಿನಲ್ಲಿ ಏಳು-ಬೀಳು ಸಹಜ. ಅದೇ ಕಳೆದ ಒಂದು ವರ್ಷ ಏಳು ತಿಂಗಳ ಅವಧಿಯಲ್ಲಿ ಸರ್ಕಾರ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಪರಿಸ್ಥಿತಿಗಳು ಸದಾ ನಮ್ಮ ಪರವಾಗಿರುವುದಿಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಸಮಸ್ಯೆ, ಸಂದರ್ಭಗಳನ್ನು ನಿರ್ವಹಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಕೊಳ್ಳುವ ಶಕ್ತಿ ಹೆಚ್ಚಳ

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯ, ಪ್ರಧಾನಿಯಾಗಿ ಡಾ.ಮನಮೋಹನ್ ಸಿಂಗ್ ಆರ್ಥಿಕ ಬೆಳವಣಿಗೆ ಲಾಭ ಜನರಿಗೆ ತಲುಪುವಂತೆ ಮಾಡಿದರು. ಜನರ ಕೊಳ್ಳುವ ಶಕ್ತಿ ಹೆಚ್ಚಿಸಲೆಂದು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಪುನರುಚ್ಚರಿಸಿದರು.

ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಸಮಾನತೆ ಸಾಧಿಸಲು ಸಾಧ್ಯವಿದೆ. ಮಧ್ಯವರ್ತಿಗಳ ಹಾವಳಿ ಮುಕ್ತ ಗ್ಯಾರಂಟಿ ಯೋಜನೆಗಳು ಲಾಭ ನೇರ ಜನರ ಕೈ ಸೇರುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದ ಜವಾಬ್ದಾರಿಯೂ ಹೆಚ್ಚಿದೆ ಎಂದರು.

ಪ್ರಾದೇಶಿಕ ಅಸಮಾಧಾನತೆ ನಿವಾರಣೆ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 35 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಡಾ.ನಂಜುಂಡಪ್ಪ ವರದಿಯಂತೆ ಅಸಮಾಧಾನತೆ ಕಡಿಮೆಯಾಗಿದೆಯೆ ? ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಆರ್ಥಿಕ ತಜ್ಞ ಗೋವಿಂದರಾವ್ ಸಮಿತಿ ರಚಿಸಲಾಗಿದೆ.

ಕಲ್ಯಾಣ ಕರ್ನಾಟಕವೂ ಸೇರಿ ಉತ್ತರ ಕರ್ನಾಟಕದ ಅಸಮಾನತೆ ಕಡಿಮೆಯಾಗಿಲ್ಲ ಎಂಬ ಬಗ್ಗೆ ಬೆಳಗಾವಿ ಅಧಿವೇಶನದಲ್ಲೂ ಚರ್ಚಿಸಿದ್ದೇವೆ. ಪ್ರಾದೇಶಿಕ ಅಸಮತೋಲನ ತೊಡೆದು ಹಾಕುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ನಿರ್ದೇಶಿಸಿದರು.

ಅಭಿವೃದ್ಧಿ ಹಣವಿಲ್ಲವೆಂಬ ಸುಳ್ಳು ಮಾಹಿತಿ

ಅಭಿವೃದ್ಧಿ ಹಣವಿಲ್ಲವೆಂಬ ಸುಳ್ಳನ್ನು ಪದೇ ಪದೆ ಹರಡಲಾಗುತ್ತದೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲವೆನ್ನುವುದು ಅಧಿಕಾರಿಗಳಿಗೆ ಗೊತ್ತಿದೆ. ಹಿಂದಿನ ಸರ್ಕಾರ ಬಜೆಟ್ ಒಪ್ಪಿಗೆ ಪಡೆಯದೆ ಮನಸೋ ಇಚ್ಛೆ ಟೆಂಡರ್ ಕರೆದು 39 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿಸಿ ಹೋಗಿದ್ದರು.

ಜತೆಗೆ ತೆರಿಗೆ ಪಾಲು ಹಂಚಿಕೆಯ್ಲಿ ಕೇಂದ್ರ ಸರ್ಕಾರದಿಂದ ಅನ್ಯಾಯ ಮುಂದುವರಿದಿದೆ. ಇದೆಲ್ಲ ಸರಿದೂಗಿಸಿಕೊಂಡು ಅಭಿವೃದ್ಧಿಗೂ ಹಣ ಒದಗಿಸುತ್ತಿದ್ದೇವೆ. ಇಲಾಖೆಗಳಲ್ಲಿರುವ ಹಣ ಸೋರಿಕೆ ಆಗದಂತೆ ತಡೆಯುವ ಜವಾಬ್ದಾರಿ, ಕರ್ತವ್ಯ ಅಧಿಕಾರಿ ವರ್ಗದ್ದಾಗಿದೆ ಎಂದರು.

ಆತ್ಮಸಾಕ್ಷಿಯಂತೆ ನಡೆಯೋಣ

ಭ್ರಷ್ಟಾಚಾರ ವ್ಯವಸ್ಘಥೆ ಕಡಿಮೆಯಾಗುವ ಬದಲಿಗೆ ಹೆಚ್ಚುತ್ತಿರುವುದು ದುರಂತ. ನಾವೆಲ್ಲರೂ ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳೋಣ. ನಮ್ಮ, ನಿಮ್ಮ ಉದ್ದೇಶ ಒಂದೇ ಸಮಾಜದ ಪ್ರಗತಿ ಮತ್ತು ಆರೋಗ್ಯಕರ ಬದಲಾವಣೆ. ಇದಕ್ಕಾಗಿ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆಯೋಣವೆಂದರು.

ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸಿದರೆ ರಾಜ್ಯ ಗಮನಾರ್ಹ ಬದಲಾವಣೆ, ಸುಧಾರಣೆಗಳನ್ನು ತರಲು ಸಾಧ್ಯವಿದೆ. ಇದಕ್ಕಾಗಿ ಅಧಿಕಾರಿಗಳ ಕಾರ್ಯಕ್ಷಮತೆ ಬಳಕೆಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹುರಿದುಂಬಿಸಿದರು.

ಭವಿಷ್ಯ ಹಾಳಾಗದಂತೆ ಎಚ್ಚರ

ಯುವಜನರು ಸಮಾಜದ ಆಸ್ತಿ, ಇವರ ಭವಿಷ್ಯ ಹಾಳಾಗದಂತೆ ಎಚ್ಚರಿಸುವ ಸವಾಲನ್ನು ಐಪಿಎಸ್ ಅಧಿಕಾರಿಗಳು ಸ್ವೀಕರಿಸಬೇಕು. ಡ್ರಗ್ಸ್ ಹಾವಳಿ, ಅಪರಧಿಕ ಜಗತ್ತಿನ ಕಡೆಗೆ ಯುವಜನರು ಆಕರ್ಷಿತರಾಗದಂತೆ ನಿಗಾವಹಿಸಬೇಕು ಎಂದರು.

ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಗತಿಯಾಗುತ್ತದೆ. ಈ ಪ್ರಗತಿ ಅಪರಾಧಗಳಿಗೆ ಬಳಕೆಯಾಗದಂತೆ ಎಚ್ಚರಿಕೆವಹಿಸಿ, ಯುವಜನರ ಭವಿಷ್ಯ ರೂಪಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಕರ್ತವ್ಯ ನಿಭಾಯಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಡಿಜಿಪಿ ಅಲೋಕ್ ಮೋಹನ್ ಇನ್ನಿತರ ಅಧಿಕಾರಿಗಳು ಇದ್ದರು.