ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳು ಸಾಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಕೆ.ಎ.ರಘು, ಎಂ.ಜಿ.ನಾಯ್ಕ್, ಅರ್ಚನಾ, ರಾಘವೇಂದ್ರ, ಗೌತಮಿ ಇತರರಿದ್ದರು.  
ನ್ಯೂಸ್

ದಿನವಿಡೀ ಕೆಲಸ, ಆದ್ರೆ ಸೌಲಭ್ಯ ಇಲ್ಲ

ಸಾಗರ: ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳು ಸಾಗರ ತಾಲೂಕು ಕಚೇರಿ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ವಿವಿಧ ಕರ್ತವ್ಯಗಳನ್ನು ನಮಗೇ ವಹಿಸುತ್ತಿದ್ದಾರೆ. ಆದರೆ ಅಗತ್ಯ ಸೌಲಭ್ಯ ನೀಡದಿರುವುದು ದುರದೃಷ್ಟಕರ ಸಂಗತಿ. ತಾಲೂಕಿನಲ್ಲಿ 37 ವೃತ್ತಗಳಿದ್ದು, ಕೇವಲ 22 ಗ್ರಾಮ ಆಡಳಿತಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ಹೊಣೆಯನ್ನು ನಮ್ಮ ಮೇಲೆ ಹಾಕಿಕೊಂಡು ಸರ್ಕಾರಿ ಸೌಲಭ್ಯ ತಲುಪಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈ ಹಿಂದೆ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ ಈತನಕ ಗಮನ ಹರಿಸಿಲ್ಲ ಎಂದು ತಾಲೂಕು ಸಂಘದ ಉಪಾಧ್ಯಕ್ಷ ಕೆ.ಎ.ರಘು ದೂರಿದರು.

ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಕೆಲಸ ಮಾಡಿದರೂ ನಮ್ಮ ಕರ್ತವ್ಯ ಮುಗಿಯುತ್ತಿಲ್ಲ. 21 ಆ್ಯಪ್‌ಗಳಲ್ಲಿ ನಾವು ಕೆಲಸ ಮಾಡಬೇಕು. ಇದಕ್ಕೆ ಮೊಬೈಲ್ ಡೇಟಾ ಶುಲ್ಕವನ್ನೂ ಕೊಡುತ್ತಿಲ್ಲ. ಪಿಡಿಒಗಳಿಗೆ ಸರ್ಕಾರ ಎಲ್ಲ ಸೌಲಭ್ಯ ನೀಡುತ್ತದೆ. ಆದರೆ ಗ್ರಾಮ ಆಡಳಿತಾಧಿಕಾರಿಗಳಿಗೆ ಕೊಡುತ್ತಿಲ್ಲ. ಸರ್ಕಾರ ಕೊರತೆ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದರು.

ತಾಲೂಕು ಅಧ್ಯಕ್ಷ ಎಂ.ಜಿ.ನಾಯ್ಕ್ ಮಾತನಾಡಿ, ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ಮೇಲೆ ಹೆಚ್ಚುತ್ತಿರುವ ಹೊರೆ ಕಡಿಮೆ ಮಾಡಬೇಕು. ಕಾರ್ಯದೊತ್ತಡದಿಂದ ಕೆಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನಮಗೆ ಟಾರ್ಗೆಟ್ ಫಿಕ್ಸ್ ಮಾಡುವುದು, ರ‌್ಯಾಂಕಿಂಗ್ ನಿಗದಿಪಡಿಸುವುದರಿಂದ ಒತ್ತಡದ ನಡುವೆ ಕೆಲಸ ಮಾಡುವ ಸ್ಥಿತಿ ಇದೆ. ಸರ್ಕಾರ ತಕ್ಷಣ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಹುಸೇನಿ ಕಟ್ಟಿಮನಿ, ರಾಘವೇಂದ್ರ, ಅರ್ಚನಾ, ರಾಘವೇಂದ್ರ, ಬೀರಪ್ಪ, ಮಧು, ಅಫ್ಸಾನಾ, ನಂದೀಶ್, ರವಿಚಂದ್ರ, ಗೌತಮಿ ಇತರರಿದ್ದರು.