ಹೊಳೆನರಸೀಪುರ: ಪೋಕ್ಸೋ ಹಾಗೂ ಮಹಿಳಾ ಕಾನೂನುಗಳು ಸದುಪಯೋಗಕ್ಕಿಂತ ದುರುಪಯೋಗ ಆಗುತ್ತಿರುವ ಬಗ್ಗೆ ಗಮನಕ್ಕೆ ಬರುತ್ತಿದ್ದು, ಇದು ಕೇಳುವುದಕ್ಕೂ, ನೋಡುವುದಕ್ಕೂ ಬಹಳ ಬೇಸರವಾಗುತ್ತದೆ. ಈ ಬಗ್ಗೆ ಚರ್ಚಿಸಬಾರದು ಸಿವಿಲ್ ನ್ಯಾಯಾಧೀಶರಾದ ಚೇತನಾ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಕಾನೂನು ಕಾಲೇಜಿನ ಸಭಾಂಗಣದಲ್ಲಿ ತಾ. ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆದ್ದರಿಂದ ವಿದ್ಯಾರ್ಥಿಗಳಾದ ನೀವು ಸೂಕ್ಷ್ಮತೆ ಅರಿತು, ಜನರಲ್ಲಿ ಅರಿವು ಮೂಡಿಸುವುದು ಹಾಗೂ ಕಾನೂನಿನ ಸದ್ಬಳಕೆ ವಿಷಯದಲ್ಲಿ ಕಾಳಜಿ ತೋರಬೇಕಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ಮತ ಚಲಾವಣೆಯ ಹಕ್ಕು ಇರಲಿಲ್ಲ, ಸಮಾನತೆ ಇರಲಿಲ್ಲ. ಈ ರೀತಿ ಎಲ್ಲ ರಂಗಗಳಲ್ಲೂ ಅಸಮಾನತೆ ಇದ್ದ ಸಂದರ್ಭದಲ್ಲಿ 15 ಸಾವಿರ ಮಹಿಳೆಯರು ಚಳವಳಿ ಪ್ರಾರಂಭಿಸಿ ಹೋರಾಡಿದ ನಂತರದಲ್ಲಿ ವಿಶ್ವಸಂಸ್ಥೆ ಮಹಿಳಾ ದಿನಚರಣೆ ಘೋಷಿಸಿದ್ದು, ಇತಿಹಾಸ. ಇಂದು ಮಹಿಳಾ ಹಕ್ಕುಗಳ ಬಗ್ಗೆ ಹಲವು ಕಾನೂನುಗಳಿದ್ದರೂ ಲಿಂಗ ಅಸಮಾನತೆ ಇದ್ದೇ ಇದೆ. ಆದ್ದರಿಂದ ನೀವು ಬದಲಾವಣೆ ಪ್ರಾರಂಭವಾಗಬೇಕು. ಪಾಲಕರು ನಂಬಿಕೆ ಇಟ್ಟು, ಹೊರಗೆ ಕಳುಹಿಸುತ್ತಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಡೆಯಬೇಕು ಎಂದು ತಿಳಿಸಿ, ಕೆಲವು ಸಲಹೆ, ಸೂಚನೆಗಳನ್ನು ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಹಾಗೂ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಎಚ್.ಭಾಗ್ಯಲಕ್ಷ್ಮೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕ ಡಾ.ಮಡಿವಾಳಪ್ಪ ಮಾಟೊಳ್ಳಿ, ಗೀತಾ, ನ್ಯಾಯಾಲಯದ ನೌಕರ ಯಶವಂತ್ ಇತರರು ಇದ್ದರು.