ಬೆಂಗಳೂರು: ತಾಯಿ, ಪತ್ನಿ, ಪುತ್ರಿ ಹೀಗೆ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಲೇ ಮಂಗಳನ ಅಂಗಳದವರೆಗೂ ಸಾಧನೆಯಲ್ಲಿ ಭಾಗಿಯಾಗು ತ್ತಿರುವ ಮಹಿಳೆಗಾಗಿ ಸಂಭ್ರಮಿಸುವ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಮತ್ತೆ ಬಂದಿದೆ. ಮಾ.8ರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಕಳೆದ ವರ್ಷದಂತೆ ಈ ವರ್ಷವೂ ವಿಜಯವಾಣಿ ಹಾಗೂ ದಿಗ್ವಿಜಯ 24X7 ನ್ಯೂಸ್ ಬೃಹತ್ ಮಟ್ಟದಲ್ಲಿ ಮಹಿಳಾ ದಿನಾಚರಣೆ ಆಯೋಜಿಸುತ್ತಿದೆ.
ಮಾ.8ರ ಭಾನುವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸಮೂಹ ಸಂವಹನ ವಿಭಾಗದ ಸಹಯೋಗವಿದೆ. 2019ರಲ್ಲಿ ಏರ್ಪಡಿಸಿದ್ದ ವಾಕಥಾನ್ನಲ್ಲಿ 7,500ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿನಿಯರು, ವಿವಿಧ ಸಂಘ-ಸಂಸ್ಥೆಗಳ, ಖಾಸಗಿ ಕಂಪನಿಗಳ ಮಹಿಳೆಯರು ಭಾಗವಹಿಸಿದ್ದರು. ಈ ವರ್ಷ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ವಾಕಥಾನ್ ಬಳಿಕ ಸಭಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐವರು ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಕನ್ನಡಪರ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಐಟಿ-ಬಿಟಿ ಕಂಪನಿಗಳ ಮಹಿಳಾ ಉದ್ಯೋಗಿಗಳು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ: 2019ರ ಮಹಿಳಾ ದಿನಾಚರಣೆಯಲ್ಲಿ ಕೆಲ ಸಂಘ-ಸಂಸ್ಥೆಗಳು ಭಾಗವಹಿಸಿ ನೃತ್ಯ, ಬ್ಯಾಂಡ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದವು. ಈ ವರ್ಷ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ವಿವಿಧ ಕಾಲೇಜಿನ ವಿದ್ಯಾರ್ಥಿಗಳ ತಂಡಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಫ್ಯಾಶನ್ ಶೋ, ಜಾನಪದ ನೃತ್ಯ, ಹಾಡು, ಸಂಗೀತ ನಡೆಸಿಕೊಡಲಿದ್ದಾರೆ. ಸಾಂಸ್ಕೃತಿಕ ಪ್ರದರ್ಶನ, ಸಾಂಪ್ರದಾಯಿಕ ಉಡುಗೆ ತೊಡುಗೆಯ ಫ್ಯಾಶನ್ ಶೋ, ಜಾನಪದ ನೃತ್ಯ, ಹಾಡು, ಸಂಗೀತ ಕಾರ್ಯಕ್ರಮ ಇರಲಿದೆ.
ಉಚಿತ ಟಿ ಶರ್ಟ್, ಕ್ಯಾಪ್: ವಾಕಥಾನ್ನಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಟಿ ಶರ್ಟ್ ಮತ್ತು ಕ್ಯಾಪ್ ನೀಡಲಾಗುತ್ತದೆ. ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ನಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಆರಂಭ: ವಿಧಾನಸೌಧ ಮುಂಭಾಗ ಸಮಯ: ಬೆಳಗ್ಗೆ 7 ಗಂಟೆ ಮಾರ್ಗ: ನೃಪತುಂಗ ರಸ್ತೆ ಮಾರ್ಗವಾಗಿ ಜ್ಞಾನಜ್ಯೋತಿ ಸಭಾಂಗಣ ಸಭಾ ಕಾರ್ಯಕ್ರಮ ಸ್ಥಳ: ಜ್ಞಾನಜ್ಯೋತಿ ಸಭಾಂಗಣ ಸಮಯ: ಬೆಳಗ್ಗೆ 10.30ರಿಂದ