ನ್ಯೂಸ್

ಮಹಿಳಾ ದಿನಾಚರಣೆ: ಜನನಿ ತಾನೆ ಮೊದಲ ಗುರುವು

Gadag - Shivanand Hiremath

ಗದಗ: ದೇಶದ ಭದ್ರತೆ ಹಾಗೂ ಪ್ರಗತಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರದಂದು  ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು,  ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ -2023 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ನಮ್ಮ ದೇಶದ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದಲ್ಲಿಯೂ ಸಹ ಮಹಿಳೆಯರು ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಕ, ವೈದ್ಯಕೀಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇವತ್ತಿನ ದಿವಸ ಅವರ ಕೊಡುಗೆಯನ್ನು ಸ್ಮರಿಸುವುದು ಇಂದಿನ ಅಗತ್ಯತೆಯಾಗಿದೆ ಹಾಗೂ ಇದರೊಂದಿಗೆ ಮಹಿಳೆಯರ ಸಾಧನೆಯನ್ನು ಪ್ರೋತ್ಸಾಹಿಸುವುದು  ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.   1977 ರಲ್ಲಿ ವಿಶ್ವ ಸಂಸ್ಥೆಯು ಮಾರ್ಚ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ನಿರ್ಣಯ ತೆಗೆದುಕೊಂಡಿತು.  ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರುರಾಣಿ ಚೆನ್ನಮ್ಮ ,ಝಾನ್ಸಿರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ ಇನ್ನೂ ಅನೇಕ ವೀರ ಮಹಿಳೆಯರು ಹೋರಾಡಿದ್ದಾರೆ.  ಕ್ರೀಡಾ ಕ್ಷೇತ್ರದಲ್ಲಿ ಪಿ.ಟಿ. ಉಷಾ, ಪಿ.ವಿ.ಸಿಂಧು, ಸಂಗೀತ ಕ್ಷೇತ್ರದಲ್ಲಿ  ಗಂಗೂಬಾಯಿ ಹಾನಗಲ್, ಲತಾ ಮಂಗೇಶ್ಕರ್ , ಸಾಮಾಜಿಕ ಕ್ಷೇತ್ರದಲ್ಲಿ  ಮದರ್ ತೆರೇಸಾ, ಪೊಲೀಸ ಸೇವೆಯಲ್ಲಿ ಕಿರಣ್ ಬೇಡಿ, ವಾಯು ಪಡೆಯಲ್ಲಿ ಕಮಾಂಡರ್ ಆಗಿ ಪ್ರಪ್ರಥಮ ಮಹಿಳೆ ಸಾಲೀಜಾ ಧಾಮಿ, ಇನ್ಫೋಸಿಸ್ ಕಂಪನಿಯ ಸುಧಾಮೂರ್ತಿ ಹಾಗೂ ಬೈಕಾನ್ ಕಂಪನಿಯ ಕಿರಣ ಮುಜುಮದಾರ್  ಹೀಗೆ ಹಲವಾರು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪುಮೂಡಿಸಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು. ಸದ್ಯ ಜಿಲ್ಲೆಯಲ್ಲಿ ಆಡಳಿತದ ಚುಕ್ಕಾಣಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿರುವುದುಹೆಮ್ಮೆಯ ಸಂಗತಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಜಾರಿಯಲ್ಲಿರುವ  ವಿವಿಧ ಯೋಜನೆಗಳ ಸದುಪಯೋಗವಾಗಬೇಕು ಹಾಗೂ ಎಲ್ಲ ಮಹಿಳೆಯರು  ಯೋಜನೆಗಳ ಸೌಲಭ್ಯ ಪಡೆಯಬೇಕಂದು ಎಸ್.ವಿ.ಸಂಕನೂರ ಸಲಹೆ ಮಾಡಿದರು.  

ಜಿಲ್ಲಾ  ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ. ಅವರು ಮಾತನಾಡಿ ಮಹಿಳೆಯರು ಶಿಕ್ಷಿತರಾದರೆ ಒಂದು ಕುಟುಂಬವಷ್ಟೇ ಅಲ್ಲದೇ ಸಮಾಜಕ್ಕೆ ಕೊಡುಗೆ ನೀಡಬಲ್ಲರು. ಮಹಿಳೆಯರು ಶಿಕ್ಷಣದಿಂದ ತಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳಬಲ್ಲರು. ಜೀವನದಲ್ಲಿನ ಎಲ್ಲ ಸವಾಲುಗಳನ್ನು ಎದುರಿಸಿ ಉನ್ನತ ಕ್ಷೇತ್ರದಲ್ಲಿ ಮುಂದುವರೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.  

ಬಾಲ ನ್ಯಾಯ ಮಂಡಳಿ ಸದಸ್ಯ ಹಾಗೂ ಹಿರಿಯ ವಕೀಲ ಜೆ.ಸಿ.ರಶ್ಮಿ ಅವರು ಉಪನ್ಯಾಸ ನೀಡಿ ಮಾತನಾಡಿ ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ವಿಶಿಷ್ಟವಾದ ಹಾಗೂ ಪೂಜ್ಯಸ್ಥಾನವನ್ನು ನೀಡಲಾಗಿದೆ. ಮನೆ ಮೊದಲ ಪಾಠಶಾಲೆ.  ಜನನಿ ತಾನೆ ಮೊದಲ ಗುರುವು ಎನ್ನುವಂತೆ ಒಂದು ಮಗುವಿಗೆ ಮನೆಯಿಂದಲೇ ಶಿಕ್ಷಣ ದೊರಯುವುದು ಪ್ರಾರಂಭವಾಗುತ್ತದೆ. ಕಾನೂನಿನ ಕಟ್ಟುನಿಟ್ಟಿನ ಪಾಲನೆಯಾದರೆ ದೇಶವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಮಹಿಳೆಯರ ರಕ್ಷಣೆ ಹಾಗೂ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅರ್ಹರೆಲ್ಲರೂ ಅವುಗಳ ಸದುಪಯೋಗಪಡೆದುಕೊಳ್ಳಬೇಕೆಂದು ವಿವರಿಸಿದರು.   

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪಿ. ಶೆಟ್ಟೆಪ್ಪನವರ ಮಾತನಾಡಿ ಇಲಾಖೆಯಿಂದ ಮಹಿಳೆಯರಿಗಾಗಿ ಇರುವ ಇಲಾಖೆಯ ಯೋಜನೆಗಳ ಸದುಪಯೋಗಪಡೆದುಕೊಳ್ಳಬೇಕೆಂದರು. ಮತದಾನ ನಮ್ಮೆಲ್ಲರ ಹಕ್ಕು . ಕಡ್ಡಾಯವಾಗಿ ಮತದಾನ ಮಾಡೋಣ. ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾನ ಪ್ರಮುಖ ಪಾತ್ರ ವಹಿಸಲಿದೆ ಎಂದರು.  

ಜಿಲ್ಲೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರ,  ಸ್ತ್ರೀಶಕ್ತಿ ಸಂಘಗಳ ಮಹಿಳೆಯರು, ಪ್ರಧಾನ ಮಾತೃ ವಂದನಾ ಯೋಜನೆ ಅಡಿಯಲ್ಲಿ  ಉತ್ತಮ ಪ್ರಗತಿ ಸಾಧಿಸಿದ ಮೇಲ್ವಿಚಾರಕಿಯರಿಗೆ, ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಮಹಿಳೆಯರಿಗೆ ಸನ್ಮಾನ ಸಮಾರಂಭ ಜರುಗಿತು.