ಮುಂಬೈ: ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಇನ್ನೇನು ಸಮೀಪಿಸುತ್ತಿದೆ. ಈ ಐತಿಹಾಸಿಕ ದಿನಾಚರಣೆ ಮೊದಲು ಆರಂಭಗೊಂಡಿದ್ದು ಉತ್ತರ ಅಮೆರಿಕ ಮತ್ತು ಯೂರೋಪ್ನ ಭಾಗಗಳಲ್ಲಿ. ಇದು ಶುರುವಾಗಿದ್ದು ಮಹಿಳಾ ಕಾರ್ಮಿಕರ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳಲು.
ಆದರೆ, ಈಗ ವಿಶ್ವದ ಅನೇಕ ದೇಶಗಳಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನಕ್ಕೆ ಕೆಲ ದೇಶಗಳು ರಾಷ್ಟ್ರಿಯ ರಜೆಯನ್ನೂ ಘೋಷಿಸಿವೆ.
ಭಾರತದಲ್ಲೂ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು, ವಿವಿಧ ಸಂಘಟನೆಗಳು ವಿವಿಧ ರೀತಿಯ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುತ್ತವೆ. ಇನ್ನು ಮಹಾರಾಷ್ಟ್ರದಲ್ಲಿ ಈ ಬಾರಿ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದ ಬುಲ್ದಾನ ಜಿಲ್ಲೆಯಲ್ಲಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿರುವುದು ಅಲ್ಲಿನ ಜಿಲ್ಲಾಧಿಕಾರಿ ಸುಮನ್ ರಾವತ್ ಚಂದ್ರ ಅವರು.
ಅಂದು ಬುಲ್ದಾನ ಜಿಲ್ಲೆಯಲ್ಲಿ ವಿಶೇಷ ಜಿಲ್ಲಾಧಿಕಾರಿಯೊಬ್ಬರು ಕಾರ್ಯ ನಿರ್ವಹಿಸಲಿದ್ದಾರೆ. ಹೌದು ಇದನ್ನು ಅಲ್ಲಿನ ಜಿಲ್ಲಾಧಿಕಾರಿ ಸುಮನ್ ರಾವತ್ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಅಂದು ಹಾಗೆ ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿರುವವರು ಅಲ್ಲಿನ ಜಿಲ್ಲಾ ಪರಿಷತ್ ನಡೆಸುವ ಶಾಲೆಯ ವಿದ್ಯಾರ್ಥಿನಿ ಪೂನಮ್ ದೇಶಮುಖ್.
ಹೀಗೆ ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಯಾಗಲು ಹಲವು ವಿದ್ಯಾರ್ಥಿನಿಯರಲ್ಲಿ ಆಯ್ಕೆಯಾಗಿದ್ದು ಪೂನಮ್. ಹೀಗೆ ಆಯ್ಕೆಯಾದ ಕೆಲ ವಿದ್ಯಾರ್ಥಿನಿಯರಿಗೆ ವಾರದವರೆಗೆ ಅವಕಾಶ ನೀಡಲಾಗುತ್ತದೆ. ಆದರೆ ಮಹಿಳಾ ದಿನಾಚರಣೆಯಂದು ಪೂನಮ್ಗೆ ಈ ಅವಕಾಶ ದೊರೆತಿದೆ.
ಈ ಟ್ವೀಟ್ಗೆ ಹಲವು ಜನರು ಪ್ರತಿಕ್ರಿಯಿಸಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಯೋಚನೆಯಿಂದ ಹಲವು ಮಹಿಳೆಯರಿಗೆ ಸ್ಫೂರ್ತಿ ದೊರೆಯಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)