ಭದ್ರಾವತಿಯಲ್ಲಿ ಆಯೋಜಿಸಿದ್ದ ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಎಂಎಲ್‌ಸಿ ಡಾ. ಧನಂಜಯ ಸರ್ಜಿ ಉದ್ಘಾಟಿಸಿದರು. ಗೌರಮ್ಮ ಶಂಕರಯ್ಯ, ನಾಗರತ್ನ ವಾಗೀಶ್, ಕುಸುಮಾ ತೀರ್ಥಯ್ಯ, ಹಾಲೇಶ್, ಕೆ.ಎಚ್.ತೀರ್ಥಯ್ಯ ಇತರರಿದ್ದರು.  
ನ್ಯೂಸ್

ಮಹಿಳೆಯರೇ, ಮಕ್ಕಳಿಗೆ ಸಂಸ್ಕಾರ ಕಲಿಸಿ

ಭದ್ರಾವತಿ: ಸಮಾಜದಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯ ಹೊರಗೆ ಪುರುಷರು ದುಡಿದರೆ, ಮಹಿಳೆಯರು ಮನೆಯಲ್ಲಿ ಕುಟುಂಬ ಜವಾಬ್ದಾರಿ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ತಿಳಿಸಿದರು.

ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ 6ನೇ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಸಮಾಜವು ಸಮಾಜಮುಖಿಯಾಗಿ ಉತ್ತಮ ಕೆಲಸ ಮಾಡುವ ಮೂಲಕ ಮಹಿಳೆಯರ ಸಮಗ್ರ ಅಭಿವೃದ್ಧಿ ಹಾಗೂ ಅವರ ಪ್ರತಿಭೆ ಅನಾವರಣಕ್ಕೆ ಸರಿಯಾದ ವೇದಿಕೆ ಕಲ್ಪಿಸಬೇಕು ಎಂದರು.

ಸಮಾಜದ ಮುಖಂಡ ಕೂಡ್ಲಿಗೆರೆ ಹಾಲೇಶ್ ಮಾತನಾಡಿ, ಸಮಾಜವು ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಗ್ರಾಮಾಂತರ ಪ್ರದೇಶದ ಮಹಿಳೆಯರನ್ನೂ ಒಳಗೊಂಡು ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಬೇಕು ಎಂದು ಸಲಹೆ ನೀಡಿದರು.

ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಿಯೋಜಿತ ಅಧ್ಯಕ್ಷೆ ನಾಗರತ್ನ ವಾಗೀಶ್ ಕೋಠಿ, ಪ್ರಧಾನ ಕಾರ್ಯದರ್ಶಿ ಕುಸುಮಾ ತೀರ್ಥಯ್ಯ, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್.ಮಹೇಶ್‌ಕುಮಾರ್, ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕರಯ್ಯ, ಯಶೋದಾ ವೀರಭದ್ರಪ್ಪ, ಆರ್.ಎಸ್.ಶೋಭಾ, ಮಧು ಪರಮೇಶ್, ಕೆ.ಎಚ್.ತೀರ್ಥಯ್ಯ, ಕುಸುಮಾ ತೀರ್ಥಯ್ಯ ಉಪಸ್ಥಿತರಿದ್ದರು.