ನ್ಯೂಸ್

ಕಟ್ಟಡದ ಅಡಿಪಾಯ ತೆರವು ವಿರೋಧಿಸಿ ಮಹಿಳೆಯರ ಪ್ರತಿಭಟನೆ

ಕೊಳ್ಳೇಗಾಲ: ಪಟ್ಟಣದ ಲಿಂಗಣಾಪುರ ಬಡಾವಣೆಯಲ್ಲಿನ ಸರ್ಕಾರಿ ಜಾಗದಲ್ಲಿ ಪರಿಶಿಷ್ಟ ಜಾತಿ ಮುಖಂಡರು ಗ್ರಂಥಾಲಯ ನಿರ್ಮಾಣಕ್ಕೆಂದು ಕಟ್ಟಡ ನಿರ್ಮಿಸಲು ತೆಗೆದಿದ್ದ ಅಡಿಪಾಯವನ್ನು ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದ ಸಂದರ್ಭ ಬಡಾವಣೆಯ ಮಹಿಳೆಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಲಿಂಗಣಾಪುರ ಬಡಾವಣೆಯಿಂದ ಟಿಸಿ ಹುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಶ್ರೀ ಮಂಟೇಸ್ವಾಮಿ ದೇವಾಲಯ ಹಾಗೂ ಓವರ್ ಹೆಡ್ ಟ್ಯಾಂಕ್ ಪಕ್ಕದಲ್ಲಿ ಸರ್ಕಾರಿ ರಸ್ತೆ (ಬಂಡಿದಾರಿ) ಜಾಗವಿದ್ದು, ಇಲ್ಲಿ ಪರಿಶಿಷ್ಟ ಜಾತಿ ಮುಖಂಡರು ಕೆಲ ದಿನಗಳ ಹಿಂದಷ್ಟೆ ಕಾಮಗಾರಿಗೆ ಚಾಲನೆ ನೀಡಿದ್ದರು. ಅಲ್ಲದೆ ಅಂಬೇಡ್ಕರ್ ಅವರ ಸಾರ್ವಜನಿಕ ಗ್ರಂಥಾಲಯ ಎಂದು ಫ್ಲೆಕ್ಸ್ ಅಳವಡಿಸಿದ್ದಾರೆ. ಈ ಕಟ್ಟಡದ ವಿಚಾರವಾಗಿ ಪ್ರಭುಸ್ವಾಮಿ ಅವರ ಪತ್ನಿ ಬಸಮ್ಮಣಿ ಕಾಮಗಾರಿ ತಡೆಹಿಡಿಯುವಂತೆ ಜೂ.10 ರಂದು ನಗರಸಭೆ ಆಯುಕ್ತರು ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.

ಲಿಂಗಣಾಪುರದಲ್ಲಿರುವ ನಮ್ಮ ಜಮೀನಿನ ಉತ್ತರಕ್ಕೆ ಬಂಡಿದಾರಿಯಿದ್ದು, ಪರಿಶಿಷ್ಟ ಜಾತಿ ಜನಾಂಗದ ಮುಖಂಡರು 12*18 ಅಡಿ ಅಳತೆಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರಿಂದ ನಮ್ಮ ಜಮೀನಿಗೆ ಹೋಗಲು ತೊಂದರೆಯಾಗಿದೆ. ಹಾಗಾಗಿ ಕಾಮಗಾರಿ ತಡೆ ಹಿಡಿಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ದೂರಿನನ್ವಯ ಈಗಾಗಲೇ ನಗರಸಭೆ ಆಯುಕ್ತ ಎ.ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಮಗಾರಿ ಸ್ಥಳ ಬಂಡಿದಾರಿ ಆಗಿರುವುದರಿಂದ ಕಂದಾಯ ಇಲಾಖೆ ಸೇರುತ್ತದೆ. ತಹಸಿಲ್ದಾರ್ ಬಸವರಾಜು ಅವರ ಸೂಚನೆಯಂತೆ ಕಂದಾಯ ನಿರೀಕ್ಷಕ ನಿರಂಜನ್, ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಹಾಗೂ ನೌಕರರು, ಪಟ್ಟಣ ಠಾಣೆ ಪಿಎಸ್‌ಐ ವರ್ಷಾ ಅವರ ನೇತೃತ್ವದಲ್ಲಿ ಕಟ್ಟಡ ತೆರವಿಗೆ ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಬಡಾವಣೆಯ ಮಹಿಳೆಯರು ಕಟ್ಟಡದ ಅಡಿಪಾಯದ ಮೇಲೆ ಕುಳಿತು ತೆರವು ಕಾರ್ಯಾಚರಣೆಗೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ತೆರವು ಮಾಡಲು ಒಂದು ದಿನ ಗಡುವು ನೀಡಿ ಹಿಂದಿರುಗಿದರು.

ಸಾರ್ವಜನಿಕವಾಗಿ ಎಲ್ಲರಿಗೂ ಉಪಯೋಗವಾಗುವಂತೆ ಗ್ರಂಥಾಲಯ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಗ್ರಂಥಾಲಯ ಕಟ್ಟುವ ಜಾಗ ಸರ್ಕಾರಿ ದಾರಿಯಾಗಿದೆಯೇ ಹೊರತು ಬಸಮ್ಮಣಿಅವರಿಗೆ ಸೇರಿದ್ದಲ್ಲ್ಲ. ಬೇಕಿದ್ದರೆ ಅಳತೆ ಮಾಡಿಸಲಿ. ಜಾಗ ಅವರಿಗೆ ಸೇರಿದ್ದರೆ ಬಿಡಿಸಿಕೊಳ್ಳಲ್ಲಿ. ಬಡಾವಣೆಯ ವಿದ್ಯಾರ್ಥಿಗಳ ಅನುಕೂಲಕ್ಕೆ ಗ್ರಂಥಾಲಯ ಕಟ್ಟಲು ಮುಂದಾಗಿದ್ದೇವೆ ಎಂದು ಪರಿಶಿಷ್ಟ ಜನಾಂಗದ ಮುಖಂಡರು ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಭಟನೆಯಲ್ಲಿ ಗಾಯತ್ರಿ, ಭಾಗ್ಯಾ, ಜ್ಯೋತಿ, ಚಂದ್ರಮ್ಮ, ಶಿವಮ್ಮ, ಗಿರಿಜಮ್ಮ, ಸೋಮಣ್ಣ, ಪುಟ್ಟರಂಗ, ಮಾದೇಶ್ ಮತ್ತಿತರರಿದ್ದರು.