ಬೆಂಗಳೂರು: ವಿಜಯಪುರ ಮಾಜಿ ಶಾಸಕ ಡಾ. ದೇವಾನಂದ ಚವ್ಹಾಣ್ ಪುತ್ರಿ ಡಿ.ಸಿ ಲತಾಶ್ರೀ ನಿರ್ಮಾಣದ ಹರ್ಷಿಣಿ ಸಿನಿಮಾಸ್ ಬ್ಯಾನರ್‌ಯಡಿಯಲ್ಲಿ ಮೂಡಿಬರುತ್ತಿರುವ ಚಿತ್ರ ‘ಕಿರುನಗೆ’. ‘ಸತ್ಯಂ’, ‘ಅಮೃತ ಘಳಿಗೆ’, ಖ್ಯಾತಿಯ ನಿರ್ದೇಶಕ ಅಶೋಕ ಕಡಬ ‘ಕಿರುನಗೆ’ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಹೆಣ್ಣು ತನ್ನ ಪ್ರೀತಿ, ಇಷ್ಟ, ಸಂತೋಷ ಎಲ್ಲವನ್ನೂ ತ್ಯಜಿಸಿ ಹೆತ್ತವರ ಸಂತೋಷಕ್ಕಾಗಿ ಹೇಗೆ ತನ್ನ ಇಡೀ ಜೀವನವನ್ನು ಮುಡುಪಾಗಿಡುತ್ತಾಳೆ ಎಂಬುದನ್ನು ನಿರೂಪಿಸಲಾಗುತ್ತಿದೆ. ಜತೆಗೆ ಹೆಣ್ಣಿನ ನಗುವಿನ ಹಿಂದೆ ಬಚ್ಚಿಟ್ಟ ಹಲವು ನಿಗೂಢ ವಿಷಯಗಳ ಸುತ್ತ ತೆರೆದುಕೊಳ್ಳುವ ಭಾವನಾತ್ಮಕ ಕಥೆ ಇದಾಗಿದೆ. ಲತಾಶ್ರೀ ಅವರೇ ಕಥೆ ಬರೆದಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಂಡದಲ್ಲಿ ಅನುಭವ ಪಡೆದಿರುವ ಸುಕೃತ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ನಾಯಕಿ ಹಾಗೂ ತಾರಾ ಬಳಗವನ್ನು ಚಿತ್ರತಂಡ ಶೀಘ್ರದಲ್ಲಿ ೋಷಿಸಲಿದೆ. ಇತ್ತೀಚೆಗಷ್ಟೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ನಿರ್ಮಾಣ ಸಂಸ್ಥೆಯ ಲೋಗೋ ಬಿಡುಗಡೆಗೊಳಿಸಿ, ‘ಹರ್ಷಿಣಿ ಸಿನಿಮಾಸ್ ಇನ್ನಷ್ಟು ಸದಭಿರುಚಿಯ ಚಿತ್ರಗಳನ್ನು ನೀಡುವಂತಾಗಲಿ. ಹಾಗೆಯೇ ‘ಕಿರುನಗೆ’ ಚಿತ್ರಕ್ಕೆ ಶುಭವಾಗಲಿ’ ಎಂದು ಹಾರೈಸಿದ್ದಾರೆ.