ನ್ಯೂಸ್

ಟಿಎಂಸಿ ಸರ್ಕಾರದಿಂದ ಜನರ ಸುರಕ್ಷತೆ ಅಸಾಧ್ಯ; ಪಶ್ಚಿಮ ಬಂಗಾಳದಲ್ಲಿ ಮೋದಿ ಗುಡುಗು | West Bengal

West Bengal: ಕೋಲ್ಕತ್ತಾದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಟಿಎಂಸಿ ಪಕ್ಷ ರಕ್ಷಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ 5,400 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ರಾಜ್ಯದ ಆರ್ಥಿಕ ಬೆಳವಣಿಗೆಗೆ ಟಿಎಂಸಿ ಅಡ್ಡಿಯಾಗುತ್ತಿದೆ. ಟಿಎಂಸಿ ಕಾರ್ಯಕರ್ತರು ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ರಾಜ್ಯದಲ್ಲಿನ 'ಗುಂಡಾ ತೆರಿಗೆ' ಹೂಡಿಕೆಗೆ ಅಡ್ಡಿಯಾಗುತ್ತಿದೆ" ಎಂದು ಆರೋಪಿಸಿದರು.

ಬಂಗಾಳದ ಯುವ ವೈದ್ಯೆ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ, ಟಿಎಂಸಿ ಸರ್ಕಾರ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂಬುದನ್ನು ಇಡೀ ರಾಜ್ಯವೇ ನೋಡಿದೆ. ಅದೇ ರೀತಿಯ ಪ್ರಕರಣ ಮತ್ತೊಂದು ಕಾಲೇಜಿನ ಯುವತಿಯ ಮೇಲೆ ನಡೆದಾಗಲೂ ಆರೋಪಿಗಳು ಟಿಎಂಸಿ ಜೊತೆ ಸಂಪರ್ಕ ಹೊಂದಿರುವುದು ಕಂಡುಬಂದಿದೆ ಎಂದು ಹೇಳಿದರು. ಟಿಎಂಸಿಯ ಆಡಳಿತದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಟೀಕಿಸಿದ ಪ್ರಧಾನಿ, ರಾಜ್ಯದ ಜನರ ಸುರಕ್ಷತೆ ಕಾಪಾಡುವಲ್ಲಿ ಮಮತಾ ಬ್ಯಾನರ್ಜಿ ಸಂಪೂರ್ಣ ವಿಫಲರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮುರ್ಷಿದಾಬಾದ್‌ನಂತಹ ಗಲಭೆಗಳು ನಡೆಯುತ್ತಿದ್ದು, ಸ್ಥಳೀಯ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸರ್ಕಾರದಿಂದ ಜನರು ಸುರಕ್ಷತೆ ಬಯಸಲು ಸಾಧ್ಯವಿಲ್ಲ ಎಂದು ಮೋದಿ ಟೀಕಿಸಿದರು.

ಇದರ ಹೊರತಾಗಿ ಪಶ್ಚಿಮ ಬಂಗಾಳದ ಮೂಲಸೌಕರ್ಯ, ಸಂಪರ್ಕ ಮತ್ತು ಶುದ್ಧ ಇಂಧನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ತೈಲ ಮತ್ತು ಅನಿಲ, ವಿದ್ಯುತ್, ರೈಲು ಮತ್ತು ರಸ್ತೆ ವಲಯಗಳಲ್ಲಿ ಪ್ರಮುಖ ಯೋಜನೆಗಳನ್ನು ಪ್ರಧಾನಿ ಅನಾವರಣಗೊಳಿಸಿದರು,(ಏಜೆನ್ಸೀಸ್).