ನ್ಯೂಸ್

ಮಹಿಳೆಯರಿಗೂ ಸೇನೆಯಲ್ಲಿ ಕಾಯಂ ಹುದ್ದೆ

ನವದೆಹಲಿ: ದೇಶದ ಮೂರೂ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಕಾಯಂ ನೇಮಕಾತಿಗೆ (ಪರ್ಮನೆಂಟ್ ಕಮಿಷನ್) ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬುಧವಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಮಹಿಳೆಯರಿಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (ಎನ್​ಡಿಎ) ಪ್ರವೇಶ ನೀಡಲಾಗುವುದೆಂದು ಸುಪ್ರೀಂ ಕೋರ್ಟ್​ಗೆ ಸರ್ಕಾರ ತಿಳಿಸಿದೆ. ಆದರೆ ಮಹಿಳೆಯರು ಎನ್​ಡಿಎ ಕೋರ್ಸ್​ಗಳಿಗೆ ಸೇರಲು ಅಗತ್ಯವಾದ ಮಾರ್ಗಸೂಚಿ ರೂಪಿಸಲು ಸಮಯ ಬೇಕಾಗುತ್ತದೆ ಎಂದಿದೆ.

ದಿನ ಬೆಳಗಾಗುವುದರೊಳಗೆ ಸುಧಾರಣೆ ಸಾಧ್ಯವಿಲ್ಲ ಎಂಬುದು ಗೊತ್ತು. ಈ ಪ್ರಕ್ರಿಯೆಗೆ ಸರ್ಕಾರ ವೇಳಾಪಟ್ಟಿ ರೂಪಿಸಲಿದೆ ಎಂದು ಕೋರ್ಟ್ ಸೂಚನೆ ನೀಡಿದೆ. ಮಹಿಳೆಯರು ಎನ್​ಡಿಎ ಹಾಗೂ ನೇವಲ್ ಅಕಾಡೆಮಿ ಪರೀಕ್ಷೆಗೆ ಹಾಜರಾಗಲು ಅವಕಾಶ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯಪಟ್ಟಿದೆ. ಸಶಸ್ತ್ರ ಪಡೆಗಳಲ್ಲಿ ಲಿಂಗ ಸಮಾನತೆಗಾಗಿ ಮಾಡಬೇಕಾದ್ದು ಸಾಕಷ್ಟಿದೆ. ಕೋರ್ಟ್​ಗಳು ಮಧ್ಯಪ್ರವೇಶ ಮಾಡುವುದಕ್ಕೂ ಮೊದಲೇ ಸೇನೆಯೇ ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎಂ.ಎಂ. ಸುಂದರೇಶ್ ಇದ್ದ ಪೀಠ ಹೇಳಿತು.

ಮಹಿಳೆಯರಿಗೂ ಎನ್​ಡಿಎ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದೆಂಬ ವಿಚಾರ ಹಂಚಿಕೊಳ್ಳಲು ಸಂತೋಷವಾಗುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾತಿ ಕೋರ್ಟ್​ಗೆ ಹೇಳಿದರು. ಜೂನ್ 24ರ ಪರೀಕ್ಷೆಯನ್ನು ನವೆಂಬರ್​ಗೆ ಬದಲಾಯಿಸಲಾಗಿದೆ. ನಿಯಮಾವಳಿ ಹಾಗೂ ಮೂಲಸೌಕರ್ಯ ಬದಲಾವಣೆಗಳು ಅಗತ್ಯವಿರುವುದರಿಂದ ಈ ಪರೀಕ್ಷೆಗಳಲ್ಲಿ ಯಥಾಸ್ಥಿತಿಗೆ ಅವಕಾಶ ನೀಡಬೇಕೆಂದು ಅವರು ಕೋರಿದರು. ಸೇನಾ ನೇಮಕಾತಿ ನೀತಿ ತಾರತಮ್ಯದಿಂದ ಕೂಡಿಲ್ಲ. ಆಸಕ್ತ ಮಹಿಳೆಯರು ನೇಮಕಾತಿಗೆ ಅರ್ಜಿ ಸಲ್ಲಿಸಲು ಹಲವು ಮಾರ್ಗಗಳಿವೆ ಎಂದು ಸರ್ಕಾರ ವಾದಿಸಿತ್ತು.

ಸುಪ್ರೀಂ ಕೋರ್ಟ್ ಆಗಸ್ಟ್ 18ರಂದು ಮಹತ್ವದ ಮಧ್ಯಂತರ ಆದೇಶ ಹೊರಡಿಸಿತ್ತು. ಮಹಿಳೆಯರು ಕೂಡ ಎನ್​ಡಿಎ ಪರೀಕ್ಷೆಗೆ ಹಾಜರಾಗಬಹುದು ಎಂದು ಆದೇಶದಲ್ಲಿ ಅದು ಹೇಳಿತ್ತು. ಸರ್ಕಾರ ಪುರುಷ ಪ್ರಧಾನ ಮನೋಭಾವ ಬದಲಾಯಿಸಿಕೊಂಡು ಮಹಿಳೆಯರಿಗೂ ಸೇನಾ ಪಡೆಗಳಲ್ಲಿ ಸಮಾನ ಅವಕಾಶ ನೀಡಬೇಕು ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆ ವೇಳಾ ಪಟ್ಟಿಯನ್ನು ಪರಿಷ್ಕರಿಸಿ ನವೆಂಬರ್ 14ಕ್ಕೆ ನಿಗದಿಪಡಿಸಲಾಗಿದೆ.

ಪರ್ಮನೆಂಟ್ ಕಮಿಷನ್ ಎಂದರೆ?

ಸೇನೆಯಲ್ಲಿ ನೇಮಕಗೊಂಡ ನಂತರ ನಿವೃತ್ತಿ ವಯಸ್ಸಿನವರೆಗೂ ಮುಂದುವರಿಯುವ ಅವಕಾಶವನ್ನು ಪರ್ಮನೆಂಟ್ ಕಮಿಷನ್ ಎನ್ನುತ್ತಾರೆ. ಸದ್ಯ ಪುರುಷ ಅಧಿಕಾರಿಗಳಿಗೆ ಮಾತ್ರ ಆ ಅವಕಾಶವಿದೆ. ಮಹಿಳೆಯರನ್ನು ಶಾರ್ಟ್ ಸರ್ವಿಸ್ ಕಮಿಷನ್ ಅಧಿಕಾರಿಗಳಾಗಿ ನೇಮಿಸಲಾಗುತ್ತದೆ. ನಂತರ ಅವರನ್ನು ಪರ್ಮನೆಂಟ್ ಕಮಿಷನ್​ಗೆ ಪರಿಗಣಿಸಲಾಗುತ್ತದೆ.