ನ್ಯೂಸ್

ಗಂಡ, ಅತ್ತೆ ಬೈಗುಳಕ್ಕೆ ಮಹಿಳೆ ಜತೆಗೆ ಹೆಣ್ಣು ಮಗು ಬಲಿ

ಚಿಕ್ಕಬಳ್ಳಾಪುರ: ಗಂಡ ಮತ್ತು ಅತ್ತೆ ನಿಂದಿಸಿದ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬಳು ಮಹಿಳಾ ದಿನಾಚರಣೆಯ ದಿನದಂದೇ ಹೆತ್ತ ಮಗಳ ಕತ್ತು ಹಿಸುಕಿ ಸಾಯಿಸಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಗೌರಿಬಿದನೂರು ತಾಲೂಕಿನ ಹುದೂತಿಯ ಮಂಜುನಾಥ್ ಪತ್ನಿ ರಾಧಾ (32) ಮತ್ತು ಒಂದು ವರ್ಷದ ಹೆಣ್ಣು ಮಗು ಮನುಜಾ ಮೃತರು. ಅಮಾಯಕ ಮಗು ಸೇರಿ ಇಬ್ಬರ ಸಾವಿನಿಂದ ಮೃತರ ಸಂಬಂಧಿಕರ ರೋಧನ ಮುಗಿಲು ಮುಟ್ಟಿದ್ದು ಮೃತಳ ತಂದೆ ಪೊಲೀಸರಿಗೆ ಅಳಿಯ, ಮಗಳ ಅತ್ತೆಯ ವಿರುದ್ಧ ದೂರು ನೀಡಿದ್ದಾರೆ. 

ಗೌರಿಬಿದನೂರು ಸಾಗಾನಹಳ್ಳಿಯ ಬೀರಪ್ಪ ಪುತ್ರಿ ರಾಧಾಳನ್ನು ಹುದೂತಿಯ ಮಂಜುನಾಥ್ ವಿವಾಹವಾಗಿದ್ದ. ಈ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ಗಲಾಟೆ ನಡೆಯುತ್ತಿತ್ತು. ಒಮ್ಮೆ ಅಳಿಯ ಮಂಜುನಾಥ್ ಬಟ್ಟೆ ಬಚ್ಚಿ ಅಸಭ್ಯವಾಗಿ ವರ್ತಿಸಿದ ಸಂದರ್ಭದಲ್ಲಿ ಮಾವ ಬೀರಪ್ಪ ಸೇರಿ ಹಲವರು ಬುದ್ದಿ ಹೇಳಿದ್ದರು. ಇದೇ ವೇಳೆ ನಡೆದ ಗಲಾಟೆಯು ರಾಜೀ ಪಂಚಾಯಿತಿಯಲ್ಲಿ ಇತ್ಯರ್ಥವಾಗಿತ್ತು. ಆದರೆ, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿನಿತ್ಯ ಪತಿ ಮಂಜುನಾಥ್ ಮತ್ತು ಅತ್ತೆ ಅಶ್ವತ್ಥಮ್ಮ ರಾಧಾಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು.  ಭಾನುವಾರ ರಾತ್ರಿ ಸಹ ಗಲಾಟೆ ನಡೆದಿದೆ. ಇದರಿಂದ ಮನನೊಂದು ಮಹಿಳಾ ದಿನಾಚರಣೆ ದಿನವಾದ ಸೋಮವಾರ ಮುಂಜಾವ 4 ಗಂಟೆಯಲ್ಲಿ ಮನೆಯ ಹಾಲ್ ನಿಂದ ಎದ್ದು ಕೊಠಡಿಯ ಬಾಗಿಲನ್ನು ಹಾಕಿಕೊಂಡು ಒಳ ಹೋದ ರಾಧಾ ಮಗುವಿನ ಕತ್ತು ಹಿಸುಕಿ ಸಾಯಿಸಿದ್ದಾಳೆ. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಹಳ ಹೊತ್ತಾದರೂ ಕೊಠಡಿಯಿಂದ ಹೊರ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಬಾಗಿಲು ಹೊಡೆದು ನೋಡಿದಾಗ ಇಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.