ನವದೆಹಲಿ: ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯರಿಬ್ಬರನ್ನು ಗದರಿದ್ದಲ್ಲದೆ, ಅವರ ತಲೆ ಮೇಲೆ ಮೊಸರು ಎರಚಿದ ಪ್ರಕರಣವೊಂದು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ಆ ವ್ಯಕ್ತಿಯ ಮೇಲೂ ಕಾನೂನುಕ್ರಮ ಜರುಗಿಸಲಾಗಿದೆ.
ಇರಾನ್ನಲ್ಲಿನ ಅಂಗಡಿಯೊಂದರಲ್ಲಿ ಗುರುವಾರ ಈ ಪ್ರಕರಣ ನಡೆದಿದ್ದು, ಆ ಕುರಿತ ವಿಡಿಯೋ ವೈರಲ್ ಆಗಿದೆ. ಇಬ್ಬರು ಮಹಿಳೆಯರು ಅಂಗಡಿಯೊಂದಕ್ಕೆ ಬಂದಿದ್ದು, ಅವರ ಹಿಂದೆಯೇ ಬಂದ ವ್ಯಕ್ತಿಯೊಬ್ಬ ಹಿಜಾಬ್ ಧರಿಸದೇ ಇದ್ದದ್ದನ್ನು ಪ್ರಶ್ನಿಸಿದ್ದಾನೆ. ಮಾತ್ರವಲ್ಲ ಸಿಟ್ಟಿಗೆದ್ದು ಅವರಿಬ್ಬರ ಮೇಲೆ ಅಲ್ಲೇ ಪಕ್ಕದಲ್ಲಿದ್ದ ಮೊಸರಿನ ಪ್ಯಾಕೆಟ್ನಿಂದ ತಲೆಗೆ ಬಾರಿಸಿದ್ದಾನೆ.
ಇನ್ನು ಹಿಜಾಬ್ ಧರಿಸದ ಕಾರಣಕ್ಕೆ ಈ ಇಬ್ಬರು ಮಹಿಳೆಯರನ್ನು ಮತ್ತು ಅವರ ಮೇಲೆ ದೌರ್ಜನ್ಯವೆಸಗಿದ್ದಕ್ಕೆ ಆ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಇರಾನ್ನಲ್ಲಿ ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮಹಿಳೆಯರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಅಲ್ಲಿನ ನ್ಯಾಯಮೂರ್ತಿ ಎಚ್ಚರಿಕೆ ನೀಡಿದ್ದು, ಇರಾನ್ನಲ್ಲಿ ಏಳು ವರ್ಷ ಮೇಲ್ಪಟ್ಟ ಎಲ್ಲ ಮಹಿಳೆ ಮತ್ತು ಮಕ್ಕಳು ಹಿಜಾಬ್ ಧರಿಸುವುದು ಕಡ್ಡಾಯ ಮಾಡಲಾಗಿದೆ. -ಏಜೆನ್ಸೀಸ್