ನ್ಯೂಸ್

ಮಹಿಳೆಗೆ ನಂಬಿಸಿ ಲಕ್ಷಾಂತರ ರೂ.ವಂಚನೆ: ಅಪ್ಪ-ಮಗನ ಬಂಧನಕ್ಕೆ ಒತ್ತಾಯಿಸಿ ಹುಣಸನಹಳ್ಳಿಯಲ್ಲಿ ಪ್ರತಿಭಟನೆ

Ramanagara

ಕನಕಪುರ : ಮಹಿಳೆಯನ್ನು ನಂಬಿಸಿ, ವಂಚಿಸಿ ಆಕೆಯಿಂದ ಲಕ್ಷಾಂತರ ರೂ. ಪಡೆದಿದ್ದಲ್ಲದೆ, ಬಂಧನದಲ್ಲಿಟ್ಟು ದೌರ್ಜನ್ಯ ಎಸಗುತ್ತಿರುವ ತಂದೆ ಮತ್ತು ಮಗನನ್ನು ಬಂಧಿಸುವಂತೆ ವೈಭವ ಕರ್ನಾಟಕ ಸಂಘಟನೆ ಹಾಗೂ ವಂಚನೆಗೊಳಗಾದ ಮಹಿಳೆಯ ಕುಟುಂಬದವರು ಹುಣಸನಹಳ್ಳಿಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿಯಲ್ಲಿ ಸಂಜೆ ಜಮಾಯಿಸಿದ್ದ ಪ್ರತಿಭಟನಾಕಾರರು ತಿಮ್ಮನದೊಡ್ಡಿಯ ಕಾವೇರಪ್ಪ ಹಾಗೂ ಪುತ್ರ ಬಾಲಾಜಿಯನ್ನು ಬಂಧಿಸುವಂತೆ ೋಷಣೆ ಕೂಗಿದರು.

ಸಂಘಟನೆ ಅಧ್ಯಕ್ಷ ಎಚ್.ಸಿ. ಪುಟ್ಟಲಿಂಗಯ್ಯ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, ಸಂತ್ರಸ್ತೆ ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ವ್ಯಾನಿಟಿ ಬ್ಯಾಗ್ ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದು, ಹೊಸಕೆರೆಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಾವು ಇಲ್ಲೇ ಗಾರೆ ಕೆಲಸ ಮಾಡಿಕೊಂಡಿರುವುದಾಗಿ 5 ವರ್ಷದ ಹಿಂದೆ ಈಕೆಯ ಪರಿಚಯ ಮಾಡಿಕೊಂಡ ಕಾವೇರಪ್ಪ ಮತ್ತು ಬಾಲಾಜಿ, ಆಕೆಯ ಒಂಟಿತನವನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ, ಬಾಲಾಜಿ ಆಕೆಯನ್ನು ನಂಬಿಸಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ.

ಕೆಲ ದಿನಗಳ ನಂತರ ಹುಣಸನಹಳ್ಳಿ ಬಳಿ ಕಡಿಮೆ ಬೆಲೆಗೆ ಜಮೀನು ಖರೀದಿಸುವ ನೆಪದಲ್ಲಿ ಹೊಸಕೆರೆಹಳ್ಳಿಯಲ್ಲಿದ್ದ ಮನೆಯನ್ನು ಮಾರಾಟ ಮಾಡಿಸಿ, ಬುಲೆಟ್ ಖರೀದಿಸಿದ್ದ. ಜಮೀನು ಖರೀದಿಗೆಂದು 4 ಲಕ್ಷ ರೂ. ಪಡೆದು, ಮುನಿಯಪ್ಪ ಎಂಬುವವರ ಜತೆ ಸೇರಿಕೊಂಡು ೈನಾನ್ಸ್ ವ್ಯವಹಾರ ಮಾಡಲು ಮುಂದಾಗಿದ್ದ. ಇತ್ತ ಮನೆ ಕಳೆದುಕೊಂಡ ಶಿಲ್ಪಾಳನ್ನು ಕೋಡಿಹಳ್ಳಿ ಹೋಬಳಿಯ ಮುನಿನಗರದ ಸಂಬಂಧಿಕರ ಮನೆಯಲ್ಲಿ ಗೃಹಬಂಧನದಲ್ಲಿಟ್ಟು ಬಾಲಾಜಿ ಮತ್ತು ಕಾವೇರಪ್ಪ ತಿಮ್ಮನದೊಡ್ಡಿಯಲ್ಲಿ ವಾಸವಾಗಿದ್ದಾರೆ. ಈ ಬಗ್ಗೆ ಕೋಡಿಹಳ್ಳಿ ಠಾಣೆಯಲ್ಲಿ ಗುರುವಾರ ದೂರು ನೀಡಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ ಎಂದರು.

ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಆನಂದ್‌ಗೌಡ, ಮಹಿಳಾ ಘಟಕದ ಉಪಾಧ್ಯಕ್ಷೆ ಸವಿತಾ, ಪದಾಧಿಕಾರಿಗಳಾದ ಶೋಭಾ, ಸ್ವಾತಿ, ವಿದ್ಯಾರ್ಥಿ ಘಟಕದ ಬಿ.ಸಿ. ನಾಗರಾಜು, ಹನುಮಂತು, ಮಹಾಲಿಂಗ ಹಲವರು ಹಾಜರಿದ್ದರು.