ಚಹಾ...ಬಹುತೇಕರ ಪ್ರಿಯ ಪಾನೀಯ. ಇದನ್ನು ವಿವಿಧ ವಿಧಾನಗಳಲ್ಲಿ ತಯಾರಿಸಬಹುದು. ಕೆಲವು ಮೊದಲು ನೀರು ಹಾಕಿ, ಟೀ ಪುಡಿ ಹಾಕಿ ಕುದಿಸುತ್ತಾರೆ..ಇನ್ನೂ ಕೆಲವರು ಹಾಲಿನಲ್ಲಿಯೇ ತಯಾರಿಸುತ್ತಾರೆ...ಒಟ್ಟಿನಲ್ಲಿ ಅವರವರು ಕಂಡುಕೊಂಡ ಮಾರ್ಗದಲ್ಲಿ ಟೀ ತಯಾರಿಸುತ್ತಾರೆ.
ಆದರೆ ಇಲ್ಲೋರ್ವ ಮಹಿಳೆ ಚಹಾ ತಯಾರಿಸಿದ್ದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಅಯ್ಯೋ..ಇದಕ್ಕೆ ಚಹಾ ಎಂದು ಹೆಸರು ಕೊಡಬಹುದಾ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ.
ಈಕೆಯ ಹೆಸರು ಮೈಕೆಲ್. ಮೂಲತಃ ಅಮೆರಿಕದವರಾಗಿದ್ದು, ಲಂಡನ್ನಲ್ಲಿ ವಾಸವಾಗಿದ್ದಾರೆ. ಸ್ವಾದಿಷ್ಟ ಪಾನೀಯವಾದ ಚಹಾವನ್ನು ತಾವು ತಯಾರಿಸುವ ಅದ್ಭುತ ವಿಧಾನದ ವಿಡಿಯೋವನ್ನು ಟಿಕ್ಟಾಕ್, ಟ್ವಿಟರ್ಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ತಲೆಕೆರೆದುಕೊಳ್ಳುತ್ತಿದ್ದಾರೆ. ವಿಡಿಯೋಕ್ಕೆ ಈಗಾಗಲೇ 73,000ಕ್ಕೂ ಹೆಚ್ಚು ವೀವ್ಸ್ ಬಂದಿದೆ. 12 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಕೊಟ್ಟಿದ್ದಾರೆ. ತರತರದ ಕಾಮೆಂಟ್ಗಳನ್ನೂ ಬರೆದಿದ್ದಾರೆ.
ತಾವು ಚಹಾ ತಯಾರಿಸುವ ವಿಧಾನವನ್ನು ವಿಡಿಯೋದಲ್ಲಿ ಹೀಗೆ ವಿವರಿಸಿದ್ದಾರೆ ಮೈಕೆಲ್..
ಬಿಸಿಬಿಸಿಯಾದ ಚಹಾ ತಯಾರಿಕೆ ಬಗ್ಗೆ ನನಗೆ ಹಲವರು ಪ್ರಶ್ನೆ ಕೇಳಿದ್ದಾರೆ. ಇವತ್ತು ನಾನು ಹೇಗೆ ಟೀ ತಯಾರಿಸುತ್ತೇನೆ ಎಂಬುದನ್ನು ತೋರಿಸುತ್ತೇನೆ. ನಾನು ಟೀ ತಯಾರಿಸುವ ಮೊದಲು ಹಲವು ಪದಾರ್ಥಗಳನ್ನು ಒಟ್ಟಿಗೆ ಮಿಕ್ಸ್ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ.
ಹಾಗೇ ಅವರು ಒಂದು ಪಾತ್ರೆಗೆ ಮೊದಲು ಟೀ ಪುಡಿ ಹಾಕುತ್ತಾರೆ. ಅದರೊಂದಿಗೆ ಎರಡು ಕಪ್ ಟ್ಯಾಂಗ್ ಪೌಡರ್( ನೀರಿಗೆ ಬೆರೆಸಿ ಕುಡಿಯುವ ಕಿತ್ತಳೆ ಫ್ಲೇವರ್ನ ಪುಡಿ..) ಸೇರಿಸುತ್ತಾರೆ. ಹಾಗೇ ಕಂಟ್ರಿ ಟೈಮ್ ಲೆಮನೇಡ್ ಪುಡಿ, ಎರಡು ಕಪ್ ಸಕ್ಕರೆ, ಸ್ವಲ್ಪ ದಾಲ್ಚಿನ್ನಿ ಪುಡಿ ಮತ್ತು ಲವಂಗದ ಪುಡಿಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡುತ್ತಾರೆ.
ನಂತರ ಒಂದು ಕಪ್ನಲ್ಲಿ ನೀರು ಹಿಡಿದು, ಅದನ್ನು ಮೈಕ್ರೋವೇವ್ನಲ್ಲಿ ಇಟ್ಟು ಬಿಸಿ ಮಾಡುತ್ತಾರೆ. ಬಿಸಿಯಾದ ನೀರಿಗೆ, ಈ ಪುಡಿಗಳ ಮಿಶ್ರಣವನ್ನು ಬೆರೆಸಿಕೊಂಡು, ಸ್ಪೂನ್ನಲ್ಲಿ ಸರಿಯಾಗಿ ಮಿಕ್ಸ್ ಮಾಡುತ್ತಾರೆ. ನೋಡಿ ಚಹಾ ಸಿದ್ಧವಾಯ್ತು ಎನ್ನುತ್ತಾರೆ.
ಇದನ್ನೂ ಓದಿ: ಕಿಲ್ಲರ್ ಕರೊನಾಗೆ ರಾಮಬಾಣವಾಯ್ತಾ ಪಾಚಿ ಕಡಲೆ ಮಿಠಾಯಿ…?
ಇವರ ವಿಡಿಯೋಗಳನ್ನು ಕೆಲವರು ಶೇರ್ ಮಾಡಿಕೊಂಡಿದ್ದಾರೆ. ಬಹುತೇಕರು ಭಯಾನಕವಾದ ಚಹಾ ಎಂದಿದ್ದಾರೆ. ನೀವೂ ಬೇಕಿದ್ದರೆ ಟ್ರೈ ಮಾಡಬಹುದು.. !