ಕೆ.ಆರ್.ನಗರ: ಕಳೆದ 4 ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯ ಹೊಟ್ಟೆಯಲ್ಲಿದ್ದ 3 ಕೆಜಿ ತೂಕದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಇತ್ತೀಚೆಗೆ ಹೊರತೆಗೆದಿದ್ದಾರೆ.
ತಾಲೂಕಿನ ಬೊಮ್ಮೆನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದು ಕಳೆದ 4 ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಾಗ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಕಂಡುಬಂದಿದ್ದು ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದರು. ಹೆಚ್ಚಿನ ಹಣ ಖರ್ಚಾಗುವುದರಿಂದ ಅವರು ಕೆ.ಆರ್.ನಗರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಭವಾನಿ ಅವರಿಗೆ ತಿಳಿಸಿದ್ದು ಮಹಿಳೆಯ ಹೊಟ್ಟೆ ನೋವಿಗೆ ಕಾರಣ ಹೊಟ್ಟೆಯಲ್ಲಿರುವ ಬೃಹತ್ ಗಾತ್ರದ ಗೆಡ್ಡೆ ಎಂದು ತಿಳಿದುಬಂದಿದೆ.
ಶಸ್ತ್ರಚಿಕಿತ್ಸೆಗಾಗಿ ಅನುಭವಿ ವೈದ್ಯರ ತಂಡವನ್ನು ರಚಿಸಿಕೊಂಡ ಡಾ.ಭವಾನಿ ಅವರು ಸತತ ಎರಡು ಗಂಟೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸುಮಾರು 3 ಕೆಜಿ ತೂಕವಿರುವ ಗೆಡ್ಡೆಯನ್ನು ಹೊರತೆಗೆದಿದ್ದು, ಗೆಡ್ಡೆಯಲ್ಲಿ ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ್ದ ಡಾ.ಭವಾನಿ, ಅರಿವಳಿಕೆ ತಜ್ಞ ಡಾ.ಎನ್.ಎಂ.ಸುನೀತಾ, ಪ್ರಸೂತಿ ತಜ್ಞ ಡಾ.ದರ್ಶನ್, ಶುಶ್ರೂಷ ಅಧಿಕಾರಿಗಳಾದ ತ್ರಿಪುರಾಂಬ, ಆಶಾ ಹಾಗೂ ಇತರ ಸಿಬ್ಬಂದಿಗೆ ಶಾಸಕ ಡಿ.ರವಿಶಂಕರ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನವೀನ್ ಕುಮಾರ್, ಟಿಎಚ್‌ಒ ಡಾ.ಕೆ.ಆರ್.ನಟರಾಜು ಅವರು ಅಭಿನಂದನೆ ಸಲ್ಲಿಸಿದ್ದಾರೆ.