ನ್ಯೂಸ್

ರಸ್ತೆ ಬದಿಯಲ್ಲಿ ಸಾಗುತ್ತಿದ್ದಾಕೆಯ ಮೇಲೇ ಹೋದ ಬಸ್; 30 ಪ್ರಯಾಣಿಕರಿದ್ದ ಬಸ್ ಅಪಘಾತ

ಬಾಗಲಕೋಟೆ: ಮೂವತ್ತು ಪ್ರಯಾಣಿಕರಿದ್ದ ಕೆಎಸ್​​ಆರ್​​ಟಿಸಿ ಬಸ್ ಅಪಘಾತಕ್ಕೀಡಾಗಿದ್ದು, ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಬಾದಾಮಿಯಲ್ಲಿ ನಡೆದ ಈ ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಕಾಳಾಪುರ ತಾಂಡಾ ನಿವಾಸಿ ವೆಂಕುಬಾಯಿ ರಾಮಣ್ಣ ಚವ್ಹಾಣ (35) ಸಾವಿಗೀಡಾಗಿದ್ದಾರೆ. ಈಕೆ ತನ್ನ ಪತಿ ಹಾಗೂ ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗುವಾಗ ಈ ಅಪಘಾತ ಸಂಭವಿಸಿದೆ‌.

ಬಾದಾಮಿಯಿಂದ ಕೆರೂರು ಕಡೆಗೆ ಹೋಗುತ್ತಿದ್ದ ಕೆಎಸ್ಆರ್​​ಟಿಸಿ ಬಸ್ ಪಾಟಾ ಕಟ್​ ಆಗಿ ನಿಯಂತ್ರಣ ತಪ್ಪಿ ವೆಂಕುಬಾಯಿ ಅವರ ಮೈಮೇಲೆ ಸಾಗಿಹೋಗಿದೆ. ಅದೃಷ್ಟವಶಾತ್ ಇವರ ಪತಿ ಹಾಗೂ ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ವೆಂಕುಬಾಯಿ ಹಾಗೂ ಕುಟುಂಬ ಬಾದಾಮಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬಸ್​ನಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.