ನ್ಯೂಸ್

ಪ್ರೀತಿಗೋಸ್ಕರ 5 ಸಾವಿರ ಕಿ.ಮೀ. ದೂರದಿಂದ ಬಂದ ಪ್ರೇಯಸಿಯನ್ನು ಕೊಂದು ಅಂಗಾಂಗಗಳನ್ನು ಮಾರಿದ ಪ್ರಿಯಕರ

ಮೆಕ್ಸಿಕೋ: ಈ ಯಾಂತ್ರಿಕ ಬದುಕಿನಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುವುದೇ ಅತಿ ದೊಡ್ಡ ಗೊಂದಲದ ಪ್ರಶ್ನೆಯಾಗಿದೆ. ಪ್ರೀತಿಯ ಹೆಸರಲ್ಲಿ ನಂಬಿಸಿ ಕುತ್ತಿಗೆ ಕುಯ್ಯುವವರ ನಡುವೆ ನಾವಿಂದು ಜೀವಿಸುತ್ತಿದ್ದೇವೆ. ಅದಕ್ಕೆ ತಾಜಾ ಉದಾಹರಣೆಯೇ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ. ಲಿವಿಂಗ್​ ಪಾರ್ಟ್ನರ್​ ಅಫ್ತಾಬ್​, ಶ್ರದ್ಧಾಳನ್ನು ಕೊಂದು ಮೃತದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಇದೀಗ ಆರು ತಿಂಗಳ ಹಿಂದೆ ನಡೆದ ಭಯಾನಕ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಶ್ರದ್ಧಾ ವಾಕರ್​ ಪ್ರಕರಣ ನೆನಪಿಸುವಂತಹ ಘಟನೆ ಪೆರುವಿನಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಬಾಯ್​ಫ್ರೆಂಡ್​ಗಾಗಿ 5000 ಕಿ.ಮೀ ಪ್ರಯಾಣಿಸಿದ್ದಳು. ಆದರೆ, ಆ ಬಾಯ್​ಫ್ರೆಂಡ್​ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಗೆ ಕಾರಣ ಕೇಳಿದ್ರೆ ಪ್ರೀತಿ, ನಂಬಿಕೆ ಸಂಪೂರ್ಣ ಸತ್ತು ಹೋಯಿತೆ ಎಂದೆನಿಸುತ್ತದೆ. ಪ್ರೇಯಸಿಯ ಅಂಗಾಂಗಗಳನ್ನು ಮಾರಾಟ ಮಾಡಲು ಪ್ರೇಯಸಿಯನ್ನೇ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾನೆ.

ವಿವರಣೆಗೆ ಬರುವುದಾದರೆ, ಮಹಿಳೆಯೊಬ್ಬಳು ಮೆಕ್ಸಿಕೋದಿಂದ ಸುಮಾರು 5 ಸಾವಿರ ಕಿ.ಮೀ ದೂರದ ಪೆರುವಿನಲ್ಲಿರುವ ಬಾಯ್​ಫ್ರೆಂಡ್​ನನ್ನು ಭೇಟಿಯಾಗಲು ಜುಲೈನಲ್ಲಿ ತೆರಳಿದ್ದಳು. ತೆರಳುವ ಮುನ್ನ ತನ್ನ ಪಾಲಕರಿಗೆ ಈ ವಿಚಾರವನ್ನು ತಿಳಿಸಿ ಹೋಗಿದ್ದಳು. ಆದರೆ, ಹುವಾಚೊ ಬೀಚ್​ನಲ್ಲಿ ಹೆಣವಾಗಿ ಪತ್ತೆಯಾಗಿದ್ದಳು. ಮೃತಳನ್ನು ಬ್ಲಾಂಕಾ ಅರೆಲ್ಲನೋ (51) ಎಂದು ಗುರುತಿಸಲಾಗಿದೆ. ಆನ್​ಲೈನ್​ನಲ್ಲಿ ಪರಿಚಯವಾಗಿದ್ದ ಬಾಯ್​ಫ್ರೆಂಡ್​ ಜುವಾನ್​ನನ್ನು ಪಬ್​ ಒಂದರಲ್ಲಿ ಭೇಟಿಯಾಗಿದ್ದಳು. ಆಕೆಯೊಂದಿಗೆ ಒಂದು ವಾರ ಕಳೆದಿದ್ದ ಜುವಾನ್​, ಬಳಿಕ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ಆಕೆಯ ಅಂಗಾಂಗಗಳನ್ನು ಕಿತ್ತು, ಮಾರಾಟ ಮಾಡಿದ್ದಾನೆ.

ನವೆಂಬರ್ 7ರ ವರೆಗೂ ಬ್ಲಾಂಕಾ ತನ್ನ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದಳು. ಅಂದು ಕರೆ ಮಾಡಿದ್ದ ಬ್ಲಾಂಕಾ, ಇಬ್ಬರ ನಡುವೆ ಬಾಂಧವ್ಯ ಚೆನ್ನಾಗಿದ್ದು, ಆ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಳು. ಆದರೆ, ನಂತರದ ದಿನಗಳಲ್ಲಿ ಆಕೆಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ, ಅನುಮಾನಗೊಂಡ ಪಾಲಕರು ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ತನಿಖೆ ಆರಂಭಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದರು. ಗೆಳೆಯ ಜುವಾನ್​ನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ. ಬೆಚ್ಚಿಬೀಳಿಸುವ ಸತ್ಯ ಬೆಳಕಿಗೆ ಬಂದಿದೆ. ಆರೋಪಿ ಜುವಾನ್, ಬ್ಲಾಂಕಾಳ ಅಂಗಾಂಗಗಳನ್ನು ಮಾರಾಟ ಮಾಡುವ ಸಲುವಾಗಿ ತಾನೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)