ಬಿಹಾರ: ಸಾಲದ ಕಂತು ಪಾವತಿಸಲು ವಿಫಲವಾದರು ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಮನಬಂದಂತೆ ಥಳಿಸಿ, ಹತ್ಯೆಗೈದ ಘಟನೆ ಗುರುವಾರ (ಸೆ.28) ಬಿಹಾರದ ಕತಿಹಾರ್‌ನಲ್ಲಿ ಸಂಭವಿಸಿದೆ.
ಸಾಲದ ಕಂತನ್ನು ಪಾವತಿ ಮಾಡಲು ವಿಫಲವಾಗಿದ್ದಕ್ಕೆ ಮನಬಂದಂತೆ ಮಹಿಳೆಯನ್ನು ಥಳಿಸಿದ ಆರೋಪಿಗಳು, ಆಕೆಯ ಸಾವಿಗೆ ಕಾರಣರಾಗಿದ್ದಾರೆ. ಘಟನೆಯ ವೇಳೆ ಮಹಿಳೆಯ ಅಪ್ರಾಪ್ತ ಮಗಳ ಮುಖಕ್ಕೂ ಗಾಯಗಳಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಮೃತ ಮಹಿಳೆಯ ಪುತ್ರಿ, "ಸಾಲ ಕೊಟ್ಟವರು ನಮ್ಮ ತಾಯಿಗೆ ಸಾಲದ ಕಂತು ನೀಡಬೇಕು ಇಲ್ಲದಿದ್ದಲ್ಲಿ ಮೊಬೈಲ್ ಫೋನ್ ಕೊಡು ಎಂದು ಒತ್ತಾಯಿಸಿದರು. ಇದಕ್ಕೆ ನಿರಾಕರಿಸಿದ ನನ್ನ ತಾಯಿ ಮೇಲೆ ಏಕಾಏಕಿ ದಾಳಿ ಮಾಡಲು ಪ್ರಾರಂಭಿಸಿದರು" ಎಂದು ಹೇಳಿದರು.
ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ. ಮಹಿಳೆಯ ಕುಟುಂಬವು ಫಾಲ್ಕಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಂತರ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕತಿಹಾರ್ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಔಪಚಾರಿಕ ಲಿಖಿತ ದೂರನ್ನು ಇನ್ನೂ ದಾಖಲಿಸಬೇಕಿದೆ. ಅದರ ಆಧಾರದ ಮೇಲೆ ಎಫ್‌ಐಆರ್ ರಿಜಿಸ್ಟರ್ ಮಾಡಲಾಗುತ್ತದೆ. ಆದ್ರೆ, ಅದನ್ನು ಮೀರಿ ಈಗಾಗಲೇ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ಪ್ರಕಾರ, ಸೆಪ್ಟೆಂಬರ್ 18 ರಂದು ಮಹಿಳೆ ಮತ್ತು ಆರೋಪಿಯ ನಡುವೆ ಜಗಳ ನಡೆದಿತ್ತು ಎಂದು ಹೇಳಿದ್ದಾರೆ,(ಏಜೆನ್ಸೀಸ್).